ಬೆಂಗಳೂರು: ವೃದ್ಧೆಯನ್ನು ‘ಡಿಜಿಟಲ್ ಅರೆಸ್ಟ್’ ಮಾಡುವುದಾಗಿ ಬೆದರಿಸಿ ಸೈಬರ್ ವಂಚಕರು ₹98.40 ಲಕ್ಷ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೊಮ್ಮನಹಳ್ಳಿ ನಿವಾಸಿ ಸ್ವರ್ಣಲತಾ ಅವರು ವಂಚನೆಗೆ ಒಳಗಾದವರು. ಮಾರ್ಚ್ 18ರಂದು ಕರೆ ಮಾಡಿದ್ದ ಆರೋಪಿಯೊಬ್ಬ ತಾನು ದೆಹಲಿ ಪೊಲೀಸ್ ಇಲಾಖೆಯ ಡಿಸಿಪಿ ಭೀಷಮ್ ಸಿಂಗ್ ಎಂದು ಪರಿಚಯಿಸಿಕೊಂಡು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ ಹಾಗೂ ಬಂಧನಕ್ಕೆ ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಹೆದರಿಸಿದ್ದಾನೆ. ಬಳಿಕ ಪೊಲೀಸ್ ಕಾನ್‌ಸ್ಟೆಬಲ್ ಸೋಗಿನಲ್ಲಿ ಮತ್ತೊಬ್ಬ ಕರೆ ಮಾಡಿ ವಿಡಿಯೊ ಕಾಲ್ ಮೂಲಕ ಸೂಚನೆಗಳನ್ನು ನೀಡಿದ್ದಾನೆ. ಕುಟುಂಬಕ್ಕೂ ಸಮಸ್ಯೆಯಾಗಬಹುದು ಎಂದು ಬೆದರಿಕೆ ಹಾಕಿ, ಹಂತಹಂತವಾಗಿ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿಸಿಕೊಂಡು ಒಟ್ಟು ₹98.40 ಲಕ್ಷ ವಂಚಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

