ರೋಣ ತಾಲೂಕಿನ ಗ್ರಾಮವೊಂದರಲ್ಲಿ ಬುದ್ಧಿಮಾಂದ್ಯೆ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಎರಡಕ್ಕೇರಿದೆ. ಬಂಧಿತನನ್ನು ನಾಗನಗೌಡ ಕಳಕನಗೌಡ್ರ ಎಂದು ಗುರುತಿಸಲಾಗಿದೆ. ಈ ಹಿಂದೆ ಬಂಧಿತನಾಗಿದ್ದ ದುರಗಪ್ಪ ಪೂಜಾರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ವೇಳೆ ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡ ಇರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ. ಇತ್ತ, ಬಂಧಿತ ನಾಗನಗೌಡ ಅವರ ಪುತ್ರ ಕುಮಾರಗೌಡ, ತಂದೆಯ ಬಂಧನ ಕುರಿತು ವಿಚಾರಿಸಲು ಠಾಣೆಗೆ ತೆರಳಿದ್ದ ವೇಳೆ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಡಿಎನ್‌ಎ ಪರೀಕ್ಷೆ ನಡೆಸುವಂತೆ ಕೇಳಿದ್ದಕ್ಕೆ ಗದರಿಸಿ ಹಲ್ಲೆ ಮಾಡಿದ್ದು, ಪ್ರಕರಣ ಮುಚ್ಚಿಹಾಕಲು ₹1 ಲಕ್ಷ ಲಂಚಕ್ಕೂ ಬೇಡಿಕೆ ಇಟ್ಟಿದ್ದರು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಪೊಲೀಸರು ತಳ್ಳಿಹಾಕಿದ್ದು, ಬುದ್ಧಿಮಾಂದ್ಯೆ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ವಿರುದ್ಧ ಆರೋಪಗಳಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಬಹುದು, ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

