ಬೆಳಗಾವಿ: ಅಕ್ರಮವಾಗಿ 24 ಸಾವಿರ ಲೀಟರ್ ಮದ್ಯಸಾರ ಸಾಗಿಸುತ್ತಿದ್ದ 12 ಚಕ್ರದ ಟ್ಯಾಂಕರ್ ಅನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಎಂ.ಕೆ. ಹುಬ್ಬಳ್ಳಿ ಪಟ್ಟಣದ ಸಮೀಪ ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಟ್ಯಾಂಕರ್ ಹಾಗೂ ಮದ್ಯಸಾರ ಸೇರಿ ಒಟ್ಟು ₹32.40 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ಹೊಳಿಹೊಸೂರು ಗ್ರಾಮದಿಂದ ಎಂ.ಕೆ. ಹುಬ್ಬಳ್ಳಿ ಕಡೆಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ 12.25ರ ಸುಮಾರಿಗೆ ಗಸ್ತು ನಡೆಸುತ್ತಿದ್ದಾಗ ಅಕ್ರಮ ಸಾಗಣೆ ಪತ್ತೆಯಾಗಿದೆ. ಟ್ಯಾಂಕರ್ ಚಾಲಕ ವಿಜಯಪುರ ಜಿಲ್ಲೆಯ ಬಂದೇನವಾಜ ನಬಿಸಾಬ್ ತಿಗಣಿಬಿದರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದ್ದು, ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಎಫ್‌ಐಆರ್ ಸಲ್ಲಿಸಲಾಗಿದೆ. ಬೆಳಗಾವಿ ದಕ್ಷಿಣ ಜಿಲ್ಲೆಯ ಅಬಕಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೈಲಹೊಂಗಲ ವಲಯದ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಬಕಾರಿ ನಿರೀಕ್ಷಕ ಶ್ರೀಶೈಲ ಅಕ್ಕಿ ಸೇರಿದಂತೆ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

