ಟೌಂಟನ್: 2019ರ ವಿಶ್ವಕಪ್ ಟೂರ್ನಿ ಭಾಗವಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರರು ಬೃಹತ್ ರನ್ ಗುರಿಯನ್ನು ನೀಡಿ ಭಾರತಕ್ಕೆ ಜಯ ತಂದು ಕೊಟ್ಟಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತ್ತು. ಈ ಬೃಹತ್ ಮೊತ್ತದ ರನ್ ಬೆನ್ನೆತ್ತಿದ ಆಸ್ಟ್ರೇಲಿಯಾ ಸತತ ನಲವತ್ತು ಓವರ್ ಗಳ ಉತ್ತಮ ಪ್ರದರ್ಶನ ನೀಡಿತ್ತು. ವಿಜಯ ಮಾಲೆ ಯಾರಿಗೆ ಎಂಬುವುದಷ್ಟು ಕುತೂಹಲಕಾರಿ ಯಾಗಿದ್ದ ಮ್ಯಾಚ್ ೪೮ ಓವರ್ ನಲ್ಲಿ ಭಾರತದ ಗೆಲುವು ಬಹುತೇಕ ಖಚಿತವಾಗಿತ್ತು. ಒಟ್ಟಾರೆ ಸಂಪೂರ್ಣ ೫೦ ಓವರ್ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ , ಭಾರತದ ಮುಂದೆ ತಲೆ ತಗ್ಗಿಸಿದೆ. ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತೀರ್ಮಾನವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಅಲ್ಲದೇ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿಯುವ ಮೂಲಕ ಆಸೀಸ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಆರಂಭಿಕರು ಎಂಬ ದಾಖಲೆ ಬರೆದರು. ಈ ಜೋಡಿ 1,152 ರನ್ ಗಳನ್ನು ಆಸೀಸ್ ವಿರುದ್ಧ ಗಳಿಸಿದ್ದು, ಈ ಹಿಂದೆ ವೆಸ್ಟ್ ಇಂಡೀಸ್ ಆಟಗಾರರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.ಆಸೀಸ್ ವಿರುದ್ಧ 22ನೇ ಬಾರಿ ಜೋಡಿಯಾಗಿ ಕಣಕ್ಕೆ ಇಳಿದ ರೋಹಿತ್, ಧವನ್ ಭಾರತ ಪರ ದಾಖಲೆ ಬರೆದರು. ಉಳಿದಂತೆ ಪಂದ್ಯದಲ್ಲಿ ಮೊದಲ ವಿಕೆಟ್‍ಗೆ ಈ ಜೋಡಿ 135 ಎಸೆತಗಳಲ್ಲಿ 127 ರನ್ ಗಳಿಸಿ ಭಾರತ ಪರ ದಾಖಲೆಯ 16ನೇ ಶತಕ ಜೊತೆಯಾಟ ನೀಡಿದರು. ಪಂದ್ಯದಲ್ಲಿ ರೋಹಿತ್ ಶರ್ಮಾ 70 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿ ಸೇರಿದಂತೆ 57 ರನ್ ಕಲೆ ಹಾಕಿದರು. ಇತ್ತ ಶಿಖರ್ ಧವನ್ 109 ಎಸೆತಗಳಲ್ಲಿ 16 ಬೌಂಡರಿ ಸಿಡಿಸುವ ಮೂಲಕ 117 ರನ್ ಗಳಿಸಿದರು. 32 ವರ್ಷದ ರೋಹಿತ್ ಆಸೀಸ್ ವಿರುದ್ಧ ವೇಗವಾಗಿ 2 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದು, 37 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೇ 40 ಇನ್ನಿಂಗ್ಸ್ ಗಳಲ್ಲಿ 2 ಸಾವಿರ ರನ್ ಗಳಿಸಿದ ಸಚಿನ್ ತೆಂಡಲ್ಕೂರ್ ಸಾಧನೆಯನ್ನ ಹಿಂದಿಕ್ಕಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





