ಬೆಳಗಾವಿ: ರಾಮನಗರದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳೇನು ಎನ್ನುವ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ. ಸುರೇಶ್ ಉತ್ತರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸವಾಲು ಹಾಕಿದರು.

ಇಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಇದುವರೆಗೂ ಮನಬಂದಂತೆ ಮತ್ತು ಏನು ಮಾಡಿದರೂ ಜಯಿಸಿಕೊಳ್ಳುತ್ತೇವೆ ಎನ್ನುವಂತೆ ಅವರು ನಡೆದುಕೊಂಡು ಬಂದಿದ್ದಾರೆ. ನಮ್ಮ ತಾಳ್ಮೆಯ ಮಿತಿ ಮೀರುವಂತೆ ಮಾಡಿದ್ದಾರೆ. ಆದ್ದರಿಂದ ಬಹಳ ಸ್ಪಷ್ಟವಾಗಿ ಅವರಿಗೆ ಸಂದೇಶ ಕೊಡಬೇಕಾಗಿತ್ತು, ಕೊಟ್ಟಿದ್ದೇನೆ’ ಎಂದರು.
ಕೇವಲ ನಿಮ್ಮ ವರ್ಚಸ್ಸು, ಪ್ರತಿಷ್ಠೆ, ಸ್ವಾರ್ಥಕ್ಕೆ ಆದ್ಯತೆ ಕೊಟ್ಟು ಬದುಕಿದವವರು ನೀವು. ಅದು ಸಾಕಾಗಿದೆ. ಸಾಧನೆ ಏನಾದರೂ ಇದ್ದರೆ ಅದನ್ನು ಕೆಲಸದಲ್ಲಿ ತೋರಿಸಬೇಕು; ಏನಾದರೂ ಕೆಲಸ ಮಾಡಿದ್ದರೆ ತೋರಿಸಿ ಎಂದು ಕೇಳಿದ್ದೇನೆ. ಆದರೆ, ಅವರಿಂದ ಉತ್ತರವಿಲ್ಲ ಎಂದು ಟಾಂಗ್ ನೀಡಿದರು.
ನಾವು ರಾಮನಗರದಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ. ಬಹಳಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದೇವೆ. ಮುಂದೇನು ಮಾಡುತ್ತೇವೆ ಎನ್ನುವುದನ್ನೂ ತಿಳಿಸಿದ್ದೇವೆ. ಹೀಗಾಗಿಯೇ, ನಾನು ಬಹಳಷ್ಟು ಆತ್ಮವಿಶ್ವಾಸ ಮತ್ತು ಧೈರ್ಯ-ಸ್ಥೈರ್ಯದಿಂದ ಮಾತನಾಡಿದ್ದೇನೆ. ಮುಖ್ಯಮಂತ್ರಿ ಬಂದಾಗ ಗಲಾಟೆ ಮಾಡುವುದಲ್ಲ; ಪುಂಡಾಟಿಕೆ ನಡೆಸುವುದಲ್ಲ ಎಂದು ಹೇಳಿದ್ದೇನೆ. ಅದನ್ನು ಸಹಿಸಿಕೊಳ್ಳಲು ಅವರಿಗೆ ಆಗಲಿಲ್ಲ ಎಂದು ಪ್ರತಿಕ್ರಿಯಿಸಿದರು.
ರಾಮನಗರದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅಶ್ವತ್ಥನಾರಾಯಣ-ಸಂಸದ ಡಿ.ಕೆ. ಸುರೇಶ್ ನಡುವೆ ಜಟಾಪಟಿ ನಡೆದಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

