ರಾಮನಗರ: ಮೇಕೆದಾಟು ಯೋಜನೆಗೆ ಪಾದಯಾತ್ರೆ ಇದೀಗ 4 ದಿನ ಸಂಪೂರ್ಣವಾಗಿ ಮುಗಿಸಿ 5 ನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆಯನ್ನು ತಡೆಯಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಲು ರಾಜ್ಯ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ಸಿದ್ದರಾಮಯ್ಯ ಮಾತನಾಡಿ , ನಮ್ಮ ಉದ್ದೇಶ ಜನರಿಗೆ ಮನವರಿಕೆಯಾಗಿದೆ. ನ್ಯಾಯಾಂಗವನ್ನು ನಾವು ಗೌರವಿಸಬೇಕು. ಪಾದಯಾತ್ರೆ ಪ್ರತಿಷ್ಠೆಯ ಪ್ರಶ್ನೆಯಲ್ಲ, ಪಕ್ಷದ ಬಗ್ಗೆ ಜನಾಭಿಪ್ರಾಯ ದೊಡ್ಡದು. ಜನರ ಹಿತ ಕಾಯುವುದು ನಮ್ಮ ಕರ್ತವ್ಯ. ಅರ್ಧದಲ್ಲಿ ಪಾದಯಾತ್ರೆ ನಿಲ್ಲಿಸಿದರೆ ಪ್ರತಿಷ್ಠೆಗೆ ಕೊಂಚ ಅಡ್ಡಿಯಾಗಬಹುದು. ಆದರೆ ಪಕ್ಷಕ್ಕೆ ಮುಜುಗರವಾಗುವುದನ್ನು ತಡೆಯಬಹುದು. ಜನರ ಅಭಿಪ್ರಾಯ, ನ್ಯಾಯಾಂಗದ ಸೂಚನೆಗೆ ಗೌರವ ನೀಡುವುದು ನಮ್ಮ ಕರ್ತವ್ಯ. ಹಾಗಾಗಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಕೋವಿಡ್ ಕಡಿಮೆಯಾದ ಬಳಿಕ ಮತ್ತೆ ಪ್ರಾರಂಭಿಸೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಹೈಕೋರ್ಟ್ ನೋಟೀಸ್, ರಾಜ್ಯ ಸರ್ಕಾರದ ಎಚ್ಚರಿಕೆ, ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆಯಲ್ಲಿ, ಕೊರೊನಾ ಸೋಂಕು ಕಡಿಮೆಯಾದ ಬಳಿಕ ಪಾದಯಾತ್ರೆಯನ್ನು ಮತ್ತೆ ಮುಂದುವರಿಸೋದು, ಸಧ್ಯಕ್ಕೆ ಪಾದಯಾತ್ರೆ ಮೊಟಕುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

