ಧಾರವಾಡ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಧಾರವಾಡದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ.
ಇತ್ತೀಚೆಗೆ ರಾಜ್ಯ ಸರ್ಕಾರವು ಈ ಯೋಜನೆ ಜಾರಿ ಸಂಬಂಧ ಕಳುಹಿಸಿದ್ದ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯ ಜೀವ ಮಂಡಳಿಯು ತಿರಸ್ಕಾರ ಮಾಡಿದೆ. ಆದರೆ ಅದೇ ಮಂಡಳಿಯು ಛತ್ತೀಸ್‌ಗಡ-ಗೋವಾ ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ಕೊಟ್ಟಿದೆ. ಇದರಿಂದ ಕರ್ನಾಟಕದ ಕಾಳಿ ಹುಲಿ ರಕ್ಷಿತಾರಣ್ಯ ಮತ್ತು ಭೀಮಗಡ ಅರಣ್ಯದಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಇಂತಹ ಕಾರ್ಯಕ್ಕೆ ಒಪ್ಪಿಗೆ ನೀಡಿರುವ ವನ್ಯ ಜೀವಿ ಮಂಡಳಿಯು ಮಹದಾಯಿ ಯೋಜನೆ ಜಾರಿಗೆ ಒಪ್ಪಿಗೆ ಕೊಟ್ಟಿಲ್ಲ. ಇದನ್ನು ಖಂಡಿಸಿ ಕೆಡಿಪಿ ಸಭೆಯಿಂದ ಠರಾವು ಪಾಸ್ ಮಾಡಲು ಶಾಸಕ ಎನ್.ಎಚ್.ಕೋನರಡ್ಡಿ ಸಚಿವ ಲಾಡ್ ಅವರ ಗಮನಸೆಳೆದರು.
ಶಾಸಕ ಕೋನರಡ್ಡಿ ಪ್ರಸ್ತಾವದ ಠರಾವು ಪಾಸ್ ಮಾಡಲು ಸಚಿವರು ಒಪ್ಪಿ ಆ ಠರಾವಿಗೆ ಅಂಗೀಕಾರ ಕೂಡ ಹಾಕಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

