ಧಾರವಾಡ : ಬಾಲಮಂದಿರದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ನಾಗರೀಕ ಸಮಾಜದಲ್ಲಿರುವ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ, ಆ ಒಂದು ಪ್ರಯತ್ನದ ಭಾಗವಾಗಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ರಾಜ್ಯಮಟ್ಟದ ಮಕ್ಕಳ ಕಥಾ ಕಮ್ಮಟವನ್ನು ನಾಡಿನ ಬಾಲ ಮಂದಿರದ ಮಕ್ಕಳಿಗಾಗಿ ಏರ್ಪಡಿಸಿದ್ದೇವೆ. ಐದು ದಿನಗಳ ಕಾಲ ನಿಸರ್ಗದ ಮಡಿಲಲ್ಲಿ ಮಕ್ಕಳ ವ್ಯಕ್ತಿತ್ವ ಅರಳಲಿ ಎನ್ನುವ ಸದಾಶಯದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ, ಇಂಥ ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ದೊರೆತಿದ್ದು ನನ್ನ ಜೀವನದ ಅಮೃತಗಳಿಗೆ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.
ಬಾಲ್ಯದಲ್ಲಿಯೇ ತಂದೆ ತಾಯಿ ಕಳೆದುಕೊಂಡು ಬದುಕು ಕಟ್ಟಿಕೊಂಡ ನನಗೆ ನಿಮ್ಮ ಕಷ್ಟದ ಬದುಕನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಎಂದು ತಂದೆ ತಾಯಿ ಇಲ್ಲದ ಮಕ್ಕಳ ಕಷ್ಟಗಳನ್ನು ನೆನೆದು ಭಾವುಕರಾದರು.
ಅವರು ಇಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಹಾಗೂ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಆಶ್ರಯದಲ್ಲಿ ಧಾರವಾಡದ ಸಮೀಪವಿರುವ ಹಳ್ಳಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇಚರ್ ಫಸ್ಟ್ ಇಕೋ ವಿಲೇಜ್ನಲ್ಲಿ ಬಾಲಮಂದಿರ ಮಕ್ಕಳಿಗಾಗಿ ನಡೆಯುತ್ತಿರುವ ರಾಜ್ಯಮಟ್ಟದ ಮಕ್ಕಳ ಕಥಾ ಕಮಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಪ್ರೇಮಿ ಹಿರೇಮಠ ಅವರು ನಿರ್ಮಿಸಿರುವ ಪರಿಸರ ಸ್ನೇಹಿಯಾದ ಈ ಅದ್ಭುತ ರೆಸಾರ್ಟಿನಲ್ಲಿ ಬಾಲ ಮಂದಿರದ ಮಕ್ಕಳೆಲ್ಲರೂ ಬಂದು ಉಳಿದುಕೊಳ್ಳಬೇಕು ಎನ್ನುವುದು ನನ್ನ ಸದಾಶಯವಾಗಿತ್ತು. ನಿಸರ್ಗದ ಮಡಿಲಿನಲ್ಲಿರುವ ಈ ಅದ್ಭುತ ತಾಣದಲ್ಲಿ ನಾಡಿನ ಮೂಲೆ ಮೂಲೆಯಿಂದ ಬಂದ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಬದುಕಿಗೆ ಒಂದು ಹೊಸ ತಿರುವು ದೊರೆಯಲಿ ಈ ಕಥಾ ಕಮ್ಮಟದಲ್ಲಿ ಭಾಗವಹಿಸಿದ ಮಗುವಿನ ಸಾಧನೆಯ ಕಥೆಯನ್ನ ಜಗತ್ತು ಮುಂದೆ ಓದುವಂತಾಗಬೇಕು ಹಾಗೆ ಮಕ್ಕಳೆಲ್ಲರೂ ಬೆಳೆಯಲೆಂದು ಸಂಗಮೇಶ ಬಬಲೇಶ್ವರ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿಯವರು ಮಾತನಾಡಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿಗೆ ಉತ್ಸಾಹವಿದೆ, ನಾಡಿನಾದ್ಯಂತ ಎಲ್ಲರೊಂದಿಗೆ ಅವರಿಗೆ ಉತ್ತಮ ಬಾಂಧವ್ಯವಿದ್ದು, ಇನ್ನು ಹೆಚ್ಚಿನ ಅನುದಾನವನ್ನು ತಂದು ಈ ನಾಡಿನ ಮಕ್ಕಳ ಸೇವೆ ಮಾಡುವಂತಾಗಲಿ, ತಂದೆ ತಾಯಿ ಇಲ್ಲದ ಮಕ್ಕಳ ಬಗೆಗಿರುವ ಅವರ ಕಳಕಳಿ ಪ್ರಸನ್ನಾತೀತವಾದದ್ದು, ರೆಸಾರ್ಟ್ನಲ್ಲಿ ಬರುವವರು ಒಂದು ದಿನ ರೆಸಾರ್ಟ್ನಲ್ಲಿ ಉಳಿದುಕೊಳ್ಳುತ್ತಾರೆ, ಆದರೆ ನಮ್ಮ ಬಾಲ ಮಂದಿರದ ಮಕ್ಕಳು ಐದು ದಿನ ರೆಸಾರ್ಟ್ನಲ್ಲಿ ಉಳಿದು ಈ ನಿಸರ್ಗದ ಮಡಿಲಿನಲ್ಲಿ ನಡೆಯುವ ಕಥಾ ಕಮ್ಮಟ ಕಾರ್ಯಕ್ರಮದಲ್ಲಿ ಹೊಸ ಸಂಕಲ್ಪ ಮತ್ತು ಹೊಸ ಹುರುಪಿನೊಂದಿಗೆ ಮುನ್ನಡೆಯುವಂತಾಗಲೆಂಬ ಆಶಯದಿಂದ ನಾಡು ಮೆಚ್ಚುವಂತಹ ಕೆಲಸವನ್ನು ನೂತನ ಅಧ್ಯಕ್ಷರು ಮಾಡಿದ್ದಾರೆ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದ ಪ್ರಾಚಾರ್ಯ ಶಶಿಧರ್ ತೋಡ್ಕರ ಅವರು ಮಾತನಾಡಿ, ಬಾಲ ಮಂದಿರದ ಮಕ್ಕಳಿಗಾಗಿ ಇಂಥದೊಂದು ಅದ್ಭುತ ಪರಿಸರದಲ್ಲಿ ಕೈಗೊಂಡ ಈ ಕಾರ್ಯಕ್ರಮ ನಿಜಕ್ಕೂ ನನಗೆ ಸಂತೋಷ ತಂದಿದೆ,
ರಾಜ್ಯದ ಎಲ್ಲಾ ಬಾಲಮಂದಿರದ ಮಕ್ಕಳಿಗಾಗಿ ನೂತನ ಅಧ್ಯಕ್ಷರು ಪ್ರವಾಸ ಕಾರ್ಯಕ್ರಮಗಳನ್ನು ರಾಜ್ಯ ಅಂತರಾಜ್ಯ ಹಾಗೂ ವಿದೇಶದ ಪ್ರವಾಸ ಕೈಗೊಳ್ಳುವುದರ ಮೂಲಕ ನಮ್ಮ ಹಿರಿಯರು ಹೇಳುವಂತೆ ದೇಶ ನೋಡು ಕೋಶ ಓದು ಎನ್ನುವಂತೆ ಮಕ್ಕಳ ಜ್ಞಾನದ ಹರಿವನ್ನು ಹೆಚ್ಚಿಸಲು ಪ್ರಯತ್ನಿಸಬೇಕೆಂದು ಹೇಳಿದರು. ಮಲೆನಾಡು ಶಿಕ್ಷಣ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ್ ಮಾತನಾಡಿದರು.
ಗ್ರಾಮ ಪಂಚಾಯತ ಅಧ್ಯಕ್ಷ ದ್ಯಾಮಣ್ಣ ಮೆಣಸಿನಕಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುರೇಶಗೌಡ ಕರಿಗೌಡ, ಸಾಹಿತಿ ಡಾ. ನಿಂಗು ಸೊಲಗಿ, ಶಿಬಿರದ ನಿರ್ದೇಶಕ ಫಕೀರೇಶ ಮುಡಿಯನ್ನವರ ಭಾಗವಹಿಸಿದ್ದರು.
ಅಕಾಡೆಮಿಯ ಯೋಚನಾಧಿಕಾರಿ ಭಾರತಿ ಶೆಟ್ಟರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತ ಸಾನಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ದೀಪ ಜಾವೂರ ವಂದನಾರ್ಪಣೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಹಳ್ಳಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಳ್ಳಿಗಳಿಂದ ಆಗಮಿಸಿದ್ದ ಗ್ರಾಮ ಪಂಚಾಯತ ಸದಸ್ಯರುಗಳು ಗ್ರಾಮ ಪಂಚಾಯತ ಅಧ್ಯಕ್ಷರ ನೇತೃತ್ವದಲ್ಲಿ ಇಂಥದೊಂದು ಅಪರೂಪದ ಕಾರ್ಯಕ್ರಮವನ್ನು ತಮ್ಮ ಭಾಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿಗೆ ವಿಶೇಷ ಸನ್ಮಾನ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

