ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ನವರಾತ್ರಿಯಲ್ಲಿ ಅರಮನೆಯು ಜಗಮಗಿಸಲು 20 ಸಾವಿರ ಹೊಸ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯವು ಭರದಿಂದ ಸಾಗಿದೆ.
ಅರಮನೆ ಮಂಡಳಿಯ ಎಲೆಕ್ಟ್ರಿಕಲ್ ವಿಭಾಗದ 12 ಸಿಬ್ಬಂದಿ, ಮಳೆ ಗಾಳಿಯಿಂದ ಹಾಳಾದ ವಿದ್ಯುತ್ ಬಲ್ಬ್‌ಗಳನ್ನು ತೆರವುಗೊಳಿಸಿ, ಹೊಸ ಬಲ್ಬ್‌ಗಳನ್ನು ಅಳವಡಿಸುವ ಕಾರ್ಯ ಮಂಗಳವಾರ ಪ್ರಾರಂಭವಾಯಿತು. ಬಲರಾಮ, ವರಾಹ, ಜಯಮಾರ್ತಾಂಡ ದ್ವಾರಗಳ ಜೊತೆಗೆ ಆವರಣದ ಎಲ್ಲ ದೇಗುಲಗಳು, ಕೋಟೆ ಸೇರಿದಂತೆ ಎಲ್ಲ ಭಾಗಗಳಿಗೂ ವಿದ್ಯುತ್ ದೀಪ ಅಳವಡಿಸಲಾಗುತ್ತಿದೆ. ಅರಮನೆಯ ಮುಖ್ಯ ಕಟ್ಟಡ, ಒಳಾಂಗಣಕ್ಕೆ ಬಣ್ಣ ಲೇಪನ ಕಾಮಗಾರಿಯು ಸೋಮವಾರದಿಂದ ನಡೆದಿದೆ.
ಅರಮನೆ ಆವರಣದ ಬೀದಿಗಳು, ಉದ್ಯಾನಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳಿಗೆ ಎಲ್‌ಇಡಿ ಬಲ್ಬ್ ಬಳಸಲಾಗಿದೆ. ಫೈವ್‌ಲೈಟ್ಸ್, ಅರಮನೆಯ ಒಳಗಿನ ತೂಗುವ ದೀಪಗಳಿಗೂ ಎಲ್‌ಇಡಿ ಬಲ್ಬ್‌ಗಳನ್ನೇ ಬಳಸಲಾಗುತ್ತದೆ ಎಂದರು.
ನವರಾತ್ರಿ ವೇಳೆ ಅರಮನೆಯಲ್ಲಿ ವಾಡಿಕೆಯಂತೆ ಸಂಜೆ 7ರಿಂದ ರಾತ್ರಿ 10ರವೆರೆಗೆ ವಿದ್ಯುತ್ ದೀಪಾಲಂಕಾರ ಜಗಮಗಿಸಲಿದೆ. ಉಳಿದ ತಿಂಗಳಲ್ಲಿ ವಿದ್ಯುತ್ ಬಿಲ್ ವೆಚ್ಚ ₹ 12 ಲಕ್ಷವಿದ್ದರೆ, ದಸರೆ ವೇಳೆ ₹ 17 ಲಕ್ಷ ದಾಟುತ್ತದೆ. ವಿದ್ಯುತ್ ದರ ಪರಿಷ್ಕರಣೆ ಆಗಿರುವುದರಿಂದ ಈ ಬಾರಿ ದರ ಹೆಚ್ಚಾಗಲಿದೆ. ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮವನ್ನು ಅರಮನೆಯ ವಿದ್ಯುತ್ ವಿಭಾಗ ವಹಿಸಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

