ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆ ಹೆಚ್ಚಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಂಬನ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಮತ್ತು ಒಮರ್ ಅಬ್ದುಲ್ಲಾ ಅವರು ಸರ್ಕಾರವನ್ನು ರಚಿಸಿದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರುದ್ಯೋಗ ಉಂಟಾಗುತ್ತದೆ. ಇದರಿಂದ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಶಾ ವಾಗ್ದಾಳಿ ನಡೆಸಿದರು, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ತಮ್ಮ ರಾಜಕೀಯ ಲಾಭಕ್ಕಾಗಿ ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆಯ ಬೆಂಕಿಗೆಸೆಯಲು ಸಿದ್ಧವಾಗಿವೆ. ಒಂದು ವೇಳೆ ಅವರ ಸರಕಾರ ಬಂದರೆ ಶಾಂತಿ ಪಥದತ್ತ ಸಾಗುತ್ತಿರುವ ಕಣಿವೆ ರಾಜ್ಯದಲ್ಲಿ ಮತ್ತೆ ಭಯೋತ್ಪಾದಕರ ಗುಂಡಿನ ಸದ್ದು ಕೇಳುತ್ತದೆ. ಕಲ್ಲು ತೂರಾಟ ನಡೆಯುತ್ತದೆ, ಸಿನಿಮಾ ಮಂದಿರಗಳನ್ನು ಮುಚ್ಚಲಾಗುತ್ತದೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 370 ಮತ್ತು 35ಎ ವಿಧಿಗಳನ್ನು ಮರಳಿ ತರುವುದು ಎನ್‌ಸಿ ಮತ್ತು ಕಾಂಗ್ರೆಸ್‌ನ ರಾಜಕೀಯ ಅಜೆಂಡಾವಾಗಿದೆ ಅಮರನಾಥ ಯಾತ್ರೆಯ ಮೇಲೆ ಮತ್ತೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಶಾ ಗುಡುಗಿದರು.
ಇದೇ ವೇಳೆ ಈ ಪ್ರದೇಶದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವವರೆಗೆ ಭಾರತವು ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ಅಥವಾ ವ್ಯಾಪಾರ ನಡೆಸುವುದಿಲ್ಲ ಎಂದು ನಾನು ಒಮರ್ ಅಬ್ದುಲ್ಲಾ ಅವರಿಗೆ ಹೇಳಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

