ಹೆಡಗಾಪೂರ: ರಾಜ್ಯದ ಎರಡನೇ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿ, ಬೀದರ್ ಜಿಲ್ಲೆ ಎಲ್ಲ ರೀತಿಯಿಂದಲೂ ಸಮೃದ್ಧವಾಗಿದೆ ಉತ್ತಮ ಹವಾಮಾನ, ಫಲವತ್ತಾದ ಭೂಮಿ, ಪಶು ಸಂಪತ್ತು ಇದೆ. ಕಾರಂಜಾ, ಮಾಂಜ್ರಾ ನದಿಗಳಿವೆ ಪಶು ಸಂಗೋಪನೆಗೆ ಉತ್ತಮ ವಾತಾವರಣ ಇದೆ. ಪಶು ಸಂಪತ್ತು ಉಳಿಸಿ, ಬೆಳೆಸಬೇಕು. ಅದರಲ್ಲೂ ಹೈಬ್ರಿಡ್‌ಗಿಂತ ದೇಶಿ ತಳಿ ಸಂರಕ್ಷಿಸಿ, ಅಭಿವೃದ್ಧಿ ಪಡಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದು ತಿಳಿಸಿದರು.
ಹೈಬ್ರಿಡ್ ತಳಿಯ ಜಾನುವಾರುಗಳಿಂದ ಹಾಲಿನ ಗುಣಮಟ್ಟ ತಗ್ಗಿದೆ. ಪೌಷ್ಟಿಕಾಂಶವೂ ಕಡಿಮೆ. ಬೇರೆ ತರಹದ ಸಮಸ್ಯೆಗಳು ಉಂಟಾಗುತ್ತಿವೆ. ದೇವಣಿ, ಮುರ್ರಾ, ಬಿದ್ರಿ ತಳಿಯ ಮೇಕೆಗಳ ಅಭಿವೃದ್ಧಿ ಮತ್ತು ಸಾಕಾಣಿಕೆಗೆ ಒತ್ತು ಕೊಡಬೇಕು. ರೈತರಿಗೆ ಸೂಕ್ತ ತರಬೇತಿ ಕೊಟ್ಟರೆ ಸ್ವಾವಲಂಬಿ, ಸ್ವಾಭಿಮಾನಿ ಆಗುತ್ತಾರೆ. ಆರ್ಥಿಕವಾಗಿ ಬಲಗೊಳ್ಳುತ್ತಾರೆ ಎಂದರು.
ನಬಾರ್ಡ್‌ನ ₹35 ಕೋಟಿ ಅನುದಾನದಲ್ಲಿ ಜಾನುವಾರು ತಳಿ ಸಂವರ್ಧನಾ ಹಾಗೂ ತರಬೇತಿ ಕೇಂದ್ರ ತಲೆ ಎತ್ತಲಿದೆ. ಹೆಡಗಾಪೂರ ಹೊರವಲಯದ 33 ಎಕರೆ ಜಾಗದಲ್ಲಿ ತಳಿ ಸಂಶೋಧನೆ, ರೈತರಿಗೆ ತರಬೇತಿ ಹಾಗೂ ಅಧಿಕಾರಿ, ಸಿಬ್ಬಂದಿಯ ಸಮುಚ್ಚಯ ನಿರ್ಮಾಣವಾಗಲಿದೆ. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಶೋಧನೆಗೂ ನೆರವಾಗಲಿದೆ. ಒಂದು ವರ್ಷದೊಳಗೆ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

