ಬೆಂಗಳೂರು: ಪ್ರತ್ಯೇಕ ಸಭೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಹುಟ್ಟುಹಾಕುತ್ತಿರುವ ಸಚಿವರ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಚಹಾ, ಭೋಜನದ ನೆಪದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಜಿ. ಪರಮೆಶ್ವರ್ ಅವರು ಗೌಪ್ಯವಾಗಿ ಸಭೆ ಸೇರಿ ಚರ್ಚಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾವವಾಗಿದೆ.
ಈ ವೇಳೆ ಮೂವರು ಸಚಿವರೂ, ಜೊತೆಯಾಗಿ ಊಟ ಮಾಡಿರುವುದನ್ನೇ ಮಾಧ್ಯಮಗಳು ಅಪಾರ್ಥ ಕಲ್ಪಿಸಿಕೊಂಡು ಬಿಂಬಿಸಿರುವುದರಿಂದ ಮತ್ತು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಗೊಂದಲಗಳು ಉಂಟಾಗಿವೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವ ಸಭೆಯೂ ನಡೆದಿಲ್ಲ. ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಪ್ರತಿಪಕ್ಷಗಳು ನಡೆಸುತ್ತಿರುವ ಷಡ್ಯಂತ್ರ ಎಂಬುದು ಎಲ್ಲರಿಗೂ ಗೊತ್ತಿದೆ. ವರಿಷ್ಠರು ಕೂಡ ಈಗಾಗಲೇ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಸಚಿವ ಸಂಪುಟವೂ ಇದೆ ಇಂತಹ ಪರಿಸ್ಥಿತಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಸಾರ್ವಜನಿಕವಾಗಿ ಅಪಾರ್ಥಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ.
ಸರ್ಕಾರ ರೂ.50 ಸಾವಿರ ಕೋಟಿ ಮೊತ್ತದಲ್ಲಿ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತಿದೆ. ಆ ಬಗ್ಗೆ ಮಾತನಾಡಬೇಕಾದ ನಾಯಕರು, ಅನಾವಶ್ಯಕ ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆ ಮತ್ತು ಬಹಿರಂಗವಾಗಿ ಚರ್ಚೆ ನಡೆಸುತ್ತಿರುವುದು, ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

