ನವಲಗುಂದ: ತಾಲೂಕು ಆಡಳಿತ ಅಧಿಕಾರಿಗಳು ಮನೆ ಬಿದ್ದು ಸಾವನ್ನಪ್ಪಿರುವ ಮಂಗಳಾ ಪಾಟೀಲ ಅವರ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಲು ವಿಳಂಬ ಮಾಡಿದ್ದನ್ನು ಖಂಡಿಸಿ ಹಾಗೂ ಕೂಡಲೇ ಚೆಕ್ ನೀಡುವಂತೆ ಆಗ್ರಹಿಸಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕಾರ್ಯಕರ್ತರು ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು.
ತಾಲೂಕಿನ ಹನಸಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆ ಬಿದ್ದು, ಸಾವನ್ನಪ್ಪಿರುವ ಮಂಗಳಾ ಪಾಟೀಲ ಕುಟುಂಬಕ್ಕೆ ಒಂದು ವಾರವಾದರೂ ಪರಿಹಾರ ನೀಡದೇ ಕುಂಟು ನೆಪ ಹೇಳುತ್ತಾ ಮುಂದೂಡುತ್ತಿದ್ದನ್ನು ಪ್ರಶ್ನಿಸಿ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ, ನೀವು ಪರಿಹಾರ ನೀಡುವವರೆಗೂ ಜಾಗ ಬಿಟ್ಟು ಏಳುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದರು.
ನಂತರ ತಹಶೀಲ್ದಾರ್ ಸುಧೀರ ಸಾಹುಕಾರ ನಿಯಮಾನುಸಾರ ಆ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ ಮಾಡಿದರು. ಇದೇ ವೇಳೆ ತಹಶೀಲ್ದಾರ್ ಅವರಿಗೆ ಇಂತಹ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಮತ್ತೇನಾದರೂ ಇದೇ ರೀತಿ ಆದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

