ದಾವಣಗೆರೆ: ಹಳ್ಳಿಯ ಆಸ್ತಿಗಳನ್ನು ಡಿಜಿಟಲ್ ಸ್ವರೂಪಕ್ಕೆ ತರಲು ಜನವರಿ ಅಂತ್ಯಕ್ಕೆ ಪ್ರತಿ ಮನೆಗೆ ಇ-ಸ್ವತ್ತು ತಲುಪಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ದಾವಣಗೆರೆ ತಾಲ್ಲೂಕಿನ 42 ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭೂಮಿ, ನಿವೇಶನ, ಮನೆಗಳಿಗೆ ಸಂಬಂಧಿಸಿದ ಆಸ್ತಿ ಕಲಹ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ. ಈ ಆಸ್ತಿಗಳ ಭೂದಾಖಲೆ ಡಿಜಿಟಲ್ ಸ್ವರೂಪ ಪಡೆದರೆ ವ್ಯಾಜ್ಯಗಳನ್ನು ಕೊಂಚ ಕಡಿಮೆ ಮಾಡಲು ಸಾಧ್ಯವಿದೆ. ಇಂತಹ ವ್ಯಾಜ್ಯಗಳಿಗೆ ಸಂಬಂಧಿಸಿದ ದೂರುಗಳು ನನ್ನ ಬಳಿಗೆ ಹೆಚ್ಚಾಗಿ ಬರುತ್ತಿವೆ. ಇ-ಸ್ವತ್ತು ವಿತರಣೆಯ ಕಾರ್ಯ ಆದ್ಯತೆಯ ಮೇರೆಗೆ ನಡೆಯಬೇಕು ಎಂದು ತಾಕೀತು ಮಾಡಿದರು.
ಇ-ಸ್ವತ್ತು ವಿತರಣೆಗೆ ₹ 300 ಶುಲ್ಕ ಹಾಗೂ 30 ದಿನಗಳ ಕಾಲಾವಧಿ ಇದೆ. ಸರ್ವರ್ ಸಮಸ್ಯೆಯ ನೆಪ ಹೇಳದೆ ಜನರಿಗೆ ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವಿಚಾರ ತಲುಪಿಸಿ ತಿಳಿವಳಿಕೆ ನೀಡಬೇಕು. ಇ-ಸ್ವತ್ತು ವಿತರಣೆಗೆ ತೊಡಕಾಗಿರುವ ಪೌತಿಖಾತೆ ಬದಲಾವಣೆಗೆ ಆಂದೋಲನ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ಪಿಡಿಒಗಳಿಗೆ ಸೂಚಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

