Breaking News

ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಅಧಿಕಾರ ತಹಶೀಲ್ದಾರರಿಗೆ ನೀಡಲಾಗಿದೆ: ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ: ಬೆಂಗಳೂರು ಸೇರಿ ರಾಜ್ಯದ ಯಾವುದೇ ಭಾಗದಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಸಂಪೂರ್ಣ ಅಧಿಕಾರವನ್ನು ತಹಶೀಲ್ದಾರರಿಗೆ ನೀಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ‘ಕರ್ನಾಟಕ ಭೂಕಂದಾಯ 3ನೇ ತಿದ್ದುಪಡಿ ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿದೆ.
ಈ ಮಸೂದೆಯಲ್ಲಿ ಒಟ್ಟು 4 ತಿದ್ದುಪಡಿಗಳಿಗೆ ಒಪ್ಪಿಗೆ ನೀಡಲಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಸೂದೆ ಮಂಡಿಸಿದರು.
ಈ ಕುರಿತು ವಿವರಣೆ ನೀಡಿದ ಕೃಷ್ಣಬೈರೇಗೌಡ, ಕರ್ನಾಟಕ ಭೂಕಂದಾಯ ಸೆಕ್ಷನ್‌ 104 ಅನ್ನು ಈ ಹಿಂದೆ ಕ್ಲಿಷ್ಟಕರವಾಗಿ ವ್ಯಾಖ್ಯಾನಗೊಳಿಸಲಾಗಿತ್ತು. ಈಗ ಅದನ್ನು ಸರಳಗೊಳಿಸಲಾಗಿದೆ. ಕಾಲುವೆ, ಬಿ-ಖರಾಬು ಸೇರಿ ಯಾವುದೇ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ, ಅದನ್ನು ತೆರವುಗೊಳಿಸುವ ಪರಮಾಧಿಕಾರ ತಹಶೀಲ್ದಾರರಿಗೆ ಇದೆ ಎಂದು ಸರಳವಾಗಿ ಉಲ್ಲೇಖಿಸಲಾಗಿದೆ. ಇದರಿಂದ ಸರ್ಕಾರದ ಆಸ್ತಿ ಸಂರಕ್ಷಿಸಲು ಸಾಧ್ಯ ಎಂದು ಹೇಳಿದರು.
ಮೂರು ಹಂತದ ಮೇಲ್ಮನವಿ ಅವಕಾಶ: ಸರ್ಕಾರಿ ಜಮೀನು ಒತ್ತುವರಿ ಮಾಡಿ ಕಾನೂನು ಹೋರಾಟಕ್ಕೆ ನೇರವಾಗಿ ಜಿಲ್ಲಾಧಿಕಾರಿಗಳ ಬಳಿ ಮೇಲ್ಮನವಿ ಹೋಗಲು ಇನ್ನು ಮುಂದೆ ಸಾಧ್ಯವಿಲ್ಲ. ಮೊದಲಿಗೆ ಉಪ-ವಿಭಾಗಾಧಿಕಾರಿ, ನಂತರ ಜಿಲ್ಲಾಧಿಕಾರಿ ಮತ್ತು ಮೂರನೇ ಹಂತದಲ್ಲಿ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ಮುಂದೆ ಹೋಗಬೇಕು. ಈ ಮೂರು ಹಂತ ದಾಟಿದ ಬಳಿಕವೇ ಹೈಕೋರ್ಟ್‌ಗೆ ಹೋಗಬಹುದು.
ಇದರಿಂದ ಕಾನೂನು ಹೋರಾಟ ನಡೆಸಲು ಸರ್ಕಾರಕ್ಕೆ ಹೆಚ್ಚಿನ ಸಮಯ ಸಿಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಯಾವುದೇ ಜಮೀನು ವ್ಯಕ್ತಿಗೆ ಸೇರಿಲ್ಲದಿದ್ದರೆ ಅದು ಸರ್ಕಾರಕ್ಕೆ ಸೇರಿದೆ ಎಂದು ಭೂಕಂದಾಯ ಕಾನೂನಿನ ಕಲಂ 67 ಹೇಳುತ್ತದೆ. ಕೆಲವರು ತಮ್ಮ ಹೆಸರಿಗೆ ಅಂತಹ ಜಮೀನುಗಳ ಖಾತೆ ಮಾಡಿಕೊಡಿ ಎಂದು ತಹಶೀಲ್ದಾರರಿಗೆ ಮನವಿ ಮಾಡುತ್ತಾರೆ. ಆದರೆ, ಅವರ ಬಳಿ ಜಮೀನಿನ ಮಾಲೀಕತ್ವ ನಿರೂಪಿಸುವ ಮೂಲ ದಾಖಲೆ ಅಥವಾ ಸಮರ್ಪಕ ದಾಖಲೆ ಇಲ್ಲದಿದ್ದರೆ ಅವರಿಗೆ ಖಾತೆ ಮಾಡಿಕೊಡುವುದು ಸಾಧ್ಯವಿಲ್ಲ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಕಂದಾಯ ಇಲಾಖೆಗೆ ಪ್ರತ್ಯೇಕ ಕಾನೂನು ವಿಭಾಗವನ್ನು ರಚಿಸಬೇಕು. ಅತಿ ಹೆಚ್ಚು ತಕರಾರು ಅರ್ಜಿಗಳು ಸಲ್ಲಿಕೆ ಆಗುತ್ತವೆ. ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ವಕೀಲರ ಕೊರತೆ ಇದೆ ಎಂದು ಹೇಳಿದರು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *