Breaking News

ಕೆನ್-ಬೆತ್ವಾ ನದಿ ಜೋಡಣೆ ಯೋಜನೆಗೆ ಇಂದು ಪ್ರಧಾನಿ ಮೋದಿ ಶಂಕುಸ್ಥಾಪನೆ

ಭೋಪಾಲ್‌: ಮಧ್ಯಪ್ರದೇಶದ ಬುಂದೇಲ್‌ಖಂಡದ ಹಣೆಬರಹವನ್ನು ಬದಲಾಯಿಸುವ ಕೆನ್‌-ಬೆತ್ವಾ ನದಿ ಜೋಡಣೆ ಯೋಜನೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದು ರಾಷ್ಟ್ರೀಯ ನದಿ ಜೋಡಣೆ ಕಾರ್ಯನೀತಿಯಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮೊದಲ ಯೋಜನೆಯಾಗಿದೆ.
ಮಧ್ಯಪ್ರದೇಶದಲ್ಲಿ ಬರಗಾಲದ ಸ್ಥಿತಿಗೆ ತುತ್ತಾಗಿರುವ ಬುಂದೇಲ್‌ಖಂಡ ಪ್ರದೇಶಕ್ಕೆ ನೀರಾವರಿ, ಕುಡಿಯುವ ನೀರು ಮತ್ತು ಜಲವಿದ್ಯುತ್‌ ಸೌಲಭ್ಯವನ್ನು ಒದಗಿಸುವ ಯೋಜನೆ ಇದಾಗಿದೆ. ಬುಧವಾರ ಮಧ್ಯಪ್ರದೇಶದ ಖಜುರಾಹೋಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ಮಧ್ಯಪ್ರದೇಶದ ಬುಂದೇಲ್‌ಖಂಡದ ಭವಿಷ್ಯವನ್ನು ಬದಲಿಸಲಿದೆ ಎಂದು ಮುಖ್ಯಮಂತ್ರಿ ಮೋಹನ್‌ ಯಾದವ್‌ ಹೇಳಿದ್ದಾರೆ.
44605 ಕೋಟಿ ರೂ. ಮೌಲ್ಯದ ಯೋಜನೆ:
ಕೆನ್‌ ಬೆತ್ವಾ ನದಿ ಯೋಜನೆಗೆ ಸಂಬಂಧಿಸಿದಂತೆ 2021ರಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಕೇಂದ್ರ ಸರ್ಕಾರಗಳು ಒಪ್ಪಂದ ಮಾಡಿಕೊಂಡಿದ್ದವು. ಇದಕ್ಕಾಗಿ ಒಟ್ಟು 44,605 ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಕಳೆದ ವರ್ಷ ಒಪ್ಪಿಗೆ ನೀಡಿತ್ತು.
ಈ ನದಿ ಜೋಡಣೆ ಯೋಜನೆಯ ಬಳಿಕ ಮಧ್ಯಪ್ರದೇಶದಲ್ಲಿ 8.11ಲಕ್ಷ ಹೆಕ್ಟೇರ್‌ ಮತ್ತು ಉತ್ತರ ಪ್ರದೇಶದ 59,000 ಹೆಕ್ಟೇರ್‌ ಪ್ರದೇಶಗಳು ನೀರಾವರಿ ಸೌಲಭ್ಯ ಪಡೆದುಕೊಳ್ಳಲಿವೆ.
ಮಧ್ಯಪ್ರದೇಶದ 10 ಜಿಲ್ಲೆಗಳ 44 ಲಕ್ಷ ಮಂದಿ ಹಾಗೂ ಉತ್ತರ ಪ್ರದೇಶದ 21 ಲಕ್ಷ ಮಂದಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಅಲ್ಲದೇ ಈ ಯೋಜನೆಯಿಂದ 103 ಮೆ.ವ್ಯಾ. ಜಲವಿದ್ಯುತ್‌ ಹಾಗೂ 27 ಮೆ.ವ್ಯಾ. ಸೌರವಿದ್ಯುತ್‌ ತಯಾರಿಸಲಾಗುತ್ತದೆ.
ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕೆನ್‌ ನದಿಯಿಂದ ಉತ್ತರ ಪ್ರದೇಶದಲ್ಲಿರುವ ಬೆತ್ವಾ ನದಿಯನ್ನು ಜೋಡಣೆ ಮಾಡುವ ಯೋಜನೆ ಇದಾಗಿದೆ. ಇದಕ್ಕಾಗಿ ಪನ್ನಾದಲ್ಲಿ ಕೆನ್‌ ನದಿಗೆ 77 ಮೀ. ಎತ್ತರ ಹಾಗೂ 2.13 ಕಿ.ಮೀ. ಉದ್ದದ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ. ಬಳಿಕ 221 ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಮಾಡುವ ಮೂಲಕ ಬೆತ್ವಾ ನದಿಗೆ ನೀರನ್ನು ಹರಿಸಲಾಗುತ್ತದೆ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *