ಬೆಳಗಾವಿ: ಕಾಂಗ್ರೆಸ್ ಪಕ್ಷದ ಶಕ್ತಿ ಏನು ಎಂಬುದು ನಮಗೆ ಗೊತ್ತಿದೆ. ನಮಗಿಂತ ಚೆನ್ನಾಗಿ ಬಿಜೆಪಿಯವರಿಗೂ ಗೊತ್ತಿದೆ. ‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಬಂದರೆ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಡಿ.26ರಂದು ಬೆಳಗಾವಿ ಚಲೋ’ ಹಮ್ಮಿಕೊಳ್ಳುತ್ತೇವೆ ಎಂದು ಬಿಜೆಪಿಯವರು ಹೇಳಿದ್ದಾರೆ. ನಾನು ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವವನಲ್ಲ. ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮದಲ್ಲಿದ್ದೇವೆ. ಯಾರಾದರೂ ಕೆಡಿಸುವ ಪ್ರಯತ್ನ ಮಾಡಲಿ ಆಮೇಲೆ ನೋಡೋಣ’ ಎಂದರು.
ಈ ಕಾರ್ಯಕ್ರಮವನ್ನು ಪಕ್ಷದ ದೃಷ್ಟಿಯಿಂದ ನೋಡಬೇಡಿ. ಕಾಂಗ್ರೆಸ್ ಪಕ್ಷ ಯಾವುದೇ ಕಾರ್ಯಕ್ರಮ ಮಾಡಿದರೂ ಪಕ್ಷದ ಕಾರ್ಯಕ್ರಮವನ್ನಾಗಿ ಮಾಡುವುದಿಲ್ಲ. ದೇಶದ ಇತಿಹಾಸ ಹಾಗೂ ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು ಎನ್ನುವುದನ್ನು ಗಮನದಲ್ಲಿಟ್ಟು ಮಾಡುತ್ತದೆ’ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಎಂದೆನಿಸಿಕೊಂಡವರು ಈ ಕಾರ್ಯಕ್ರಮಕ್ಕೆ ಬರಬೇಕು. ಡಿ.26ರಂದು ಬೆಳಿಗ್ಗೆ ಕೆಲವು ಸ್ಥಳಗಳಲ್ಲಿ ಉದ್ಘಾಟನಾ ಕಾರ್ಯಕ್ರಮಗಳಿವೆ. 1924ರಲ್ಲಿ ಗಾಂಧೀಜಿ ಅವರ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ ಡಿ.26ರ ಮಧ್ಯಾಹ್ನ 3 ಗಂಟೆಗೆ ನಡೆದಿತ್ತು. ಅದೇ ರೀತಿ ಇದೇ 26ರಂದು ಮಧ್ಯಾಹ್ನ 3ಕ್ಕೆ ನಮ್ಮ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 27ರಂದು ಬೆಳಿಗ್ಗೆ 10.30ಕ್ಕೆ ಸರ್ಕಾರದ ವತಿಯಿಂದ ಸುವರ್ಣಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣ ಮಾಡಲಾಗುವುದು. ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಭೆ ನಡೆಯಲಿದೆ’ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

