ಕೊಪ್ಪಳ: ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಸಲುವಾಗಿ ಅಧಿಕಾರಿಗಳು ಸರ್ವೆ ಮಾಡಲು ಬಂದಿದ್ದಾರೆ ಎಂದು ಆತಂಕಗೊಂಡ ತಾಲ್ಲೂಕಿನ ಅರಸಿನಕೇರಿ ಗ್ರಾಮಸ್ಥರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳು ನಿಕ್ಷೇಪ ಪತ್ತೆ ಸರ್ವೆಗಾಗಿ ಅರಸಿನಕೇರಿಗೆ ತೆರಳಿದ್ದಾಗ ಗ್ರಾಮಸ್ಥರು ಅಧಿಕಾರಿಗಳ ವಾಹನದ ಮುಂದೆ ಕುಳಿತು ಅವರನ್ನು ತರಾಟೆಗೆ ತೆಗೆದುಕೊಂಡರು.
ನಾವು ಪರಮಾಣು ಸ್ಥಾವರದ ಬಗ್ಗೆ ಸರ್ವೆ ಮಾಡಲು ಬಂದಿಲ್ಲ. ಭೂಮಿಯಲ್ಲಿರುವ ಖನಿಜದ ಬಗ್ಗೆ ಮಾಹಿತಿ ಸಂಗ್ರಹಿಸಲು ಮಾತ್ರ ಬಂದಿದ್ದೇವೆ’ ಎಂದು ಅಧಿಕಾರಿಗಳು ಮೇಲಿಂದ ಮೇಲೆ ಹೇಳಿದರೂ ಗ್ರಾಮಸ್ಥರು ಕೇಳಲಿಲ್ಲ. ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡರು. ಜನ ಅವರ ವಾಹನಗಳ ಮುಂದೆ ಕುಳಿತು ಪ್ರತಿಭಟಿಸಿದರು.
ಇದರಿಂದ ಆತಂಕಗೊಂಡ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಕಂದಾಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ, ಗ್ರಾಮಸ್ಥರಿಗೆ ತಿಳಿ ಹೇಳಿದ ಬಳಿಕ ಪರಿಸ್ಥಿತಿ ಶಾಂತವಾಯಿತು. ‘ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರಮಾಣು ಸ್ಥಾವರಕ್ಕೆ ಸರ್ವೆ ಮಾಡುತ್ತಿಲ್ಲ’ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಲಿಖಿತವಾಗಿ ಬರೆದುಕೊಟ್ಟ ಬಳಿಕವಷ್ಟೇ ಗ್ರಾಮಸ್ಥರು ಸುಮ್ಮನಾದರು ಎಂದು ಗೊತ್ತಾಗಿದೆ.
ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಭೂಮಿ ಹುಡುಕುವಂತೆ ಇತ್ತೀಚೆಗೆ ತಹಶೀಲ್ದಾರ್‌ಗಳಿಗೆ ಪತ್ರ ಬರೆದಿದ್ದರು. ಆರಂಭದಲ್ಲಿ ಅರಸನಕೇರಿ ಭಾಗದಲ್ಲಿ ಭೂಮಿ ಹುಡುಕಲಾಗುತ್ತಿತ್ತು. ಈಗಲೂ ಅದೇ ಕಾರಣಕ್ಕೆ ಅಧಿಕಾರಿಗಳು ಬಂದಿದ್ದಾರೆ ಎಂದು ಗ್ರಾಮಸ್ಥರು ಆತಂಕಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

