Breaking News

ವಾಣಿವಿಲಾಸ ಜಲಾಶಯಕ್ಕೆ ಜ.18 ರಂದು ಬಾಗಿನ ಅರ್ಪಣೆ: ಅಧಿಕಾರಿಗಳೊಂದಿಗೆ ಸಭೆ

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಲು ಜ. 18ರಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸಿದ್ಧತೆಗಾಗಿ ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
120 ವರ್ಷಗಳಲ್ಲಿ ಮೂರನೇ ಬಾರಿ ಜಲಾಶಯ ಕೋಡಿ ಬಿದ್ದಿದೆ. 1933 ಮತ್ತು 2022ರಲ್ಲಿ ವರುಣನ ಕೃಪೆಯಿಂದ ಕೋಡಿ ಬಿದ್ದಿದ್ದರೆ, ಈ ಬಾರಿ ನಮ್ಮ ಪಾಲಿನ ನೀರನ್ನು ಜ. 31ರವರೆಗೆ ಹರಿಸಲು ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಜಲಾಶಯ ಕೋಡಿ ಬಿದ್ದಿದೆ. ಇದೊಂದು ಐತಿಹಾಸಿಕ ಕ್ಷಣ. ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಒಂದಿಷ್ಟೂ ಲೋಪಕ್ಕೆ ಅವಕಾಶ ಕೊಡದ ರೀತಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.
ಸಮಾರಂಭಕ್ಕೆ ಬರುವವರಿಗೆ ಕುಡಿಯುವ ನೀರು, ಊಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ಶೌಚಾಲಯದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ವಿವಿ ಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆಲಿಪ್ಯಾಡ್‌ನಲ್ಲಿ ಇಳಿಯುವ ಮುಖ್ಯಮಂತ್ರಿ ಕಣಿವೆ ಮಾರಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ಸ್ವಚ್ಛತೆ, ಸುರಕ್ಷತೆ ನಿರ್ವಹಣೆ ಮಾಡಬೇಕು. ಸಮಾರಂಭಕ್ಕೆ ಬೇರೆಬೇರೆ ಜಿಲ್ಲೆ ಹಾಗೂ ತಾಲ್ಲೂಕುಗಳಿಂದಲೂ ಜನರು ಬರಲಿದ್ದಾರೆ. ವೇದಿಕೆಯಲ್ಲಿ ಪ್ರೊಟೋಕಾಲ್ ಮೀರದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಸುಧಾಕರ್ ಸೂಚಿಸಿದರು.
ಬಾಗಿನ ಕಾರ್ಯಕ್ರಮದ ಹೊಣೆಗಾರಿಕೆಯನ್ನು ಒಂದೊಂದು ಇಲಾಖೆಗೆ ಪ್ರತ್ಯೇಕ ಕಾರ್ಯಗಳನ್ನು ವಹಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ಮುಗಿದಿದೆ. ಹೆಲಿಪ್ಯಾಡ್‌ನಿಂದ ಅಣೆಕಟ್ಟೆವರೆಗಿನ ಎರಡೂವರೆ ಕಿ.ಮೀ. ರಸ್ತೆ ಅಭಿವೃದ್ಧಿ ಕಾರ್ಯ ಅಂತಿಮ ಹಂತದಲ್ಲಿದೆ. ವೇದಿಕೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಗತ್ಯ ಇರುವಷ್ಟು ಸಂಚಾರಿ ಶೌಚಾಲಯ, ಸಂಚಾರಿ ಆರೋಗ್ಯ ಕೇಂದ್ರ, ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಆಹಾರ ವಿತರಿಸುವ ಮೊದಲು ಸಂಬಂಧಿಸಿದ ಅಧಿಕಾರಿಗಳು ಸುರಕ್ಷತೆ ಖಚಿತ ಪಡಿಸಿಕೊಂಡು ಸಾರ್ವಜನಿಕರಿಗೆ ಬಡಿಸಬೇಕು. ಎಲ್ಲ ಅಧಿಕಾರಿಗಳು ಇದನ್ನು ತಮ್ಮ ಮನೆಯ ಸಮಾರಂಭ ಎಂದು ಭಾವಿಸಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮನವಿ ಮಾಡಿದರು.
ಅಣೆಕಟ್ಟೆಗೆ ದೀಪಾಲಂಕಾರ: ಅಣೆಕಟ್ಟೆಯ ಗೇಟ್‌ಗಳಿಗೆ, ಅಣೆಕಟ್ಟೆಗೆ ಸುಣ್ಣ ಬಣ್ಣ ಬಳಿಸಲಾಗುತ್ತಿದೆ. ಒಂದು ದಿನ ಮುಂಚಿತವಾಗಿಯೇ ಅಣೆಕಟ್ಟೆಗೆ ವಿಶೇಷ ರೀತಿಯಲ್ಲಿ ದೀಪಾಲಂಕಾರ ಮಾಡಿ, ಬಾಗಿನ ಸಮರ್ಪಣೆ ಮುಗಿದ ನಂತರ ಮೂರ್ನಾಲ್ಕು ದಿನ ಪ್ರವಾಸಿಗರಿಗಾಗಿ ದೀಪಾಲಂಕಾರ ಮುಂದುವರಿಸುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸೋಮಶೇಖರ್, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಲಮಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಉಪ ವಿಭಾಗಾಧಿಕಾರಿ ವೆಂಕಟೇಶ ನಾಯಕ್, ತಹಶೀಲ್ದಾರ್ ಸಿ.ರಾಜೇಶ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ರೇಣುಕಾಪ್ರಸಾದ್, ಡಿವೈಎಸ್ಪಿ ಶಿವಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಕಾಳಿಕೃಷ್ಣ, ರಾಘವೇಂದ್ರ ಕಾಂಡಿಕೆ, ಚಂದ್ರಶೇಖರಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಬಿಇಒ ಸಿ.ಎಂ.ತಿಪ್ಪೇಸ್ವಾಮಿ, ನಗರಸಭೆ ಪೌರಾಯುಕ್ತ ಎ.ವಾಸಿಂ, ಅರಣ್ಯ ಇಲಾಖೆ ಅಧಿಕಾರಿಗಳಾದ ಶಶಿಧರ್, ರವಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನಾಗೇಂದ್ರನಾಯ್ಕ ಪಾಲ್ಗೊಂಡಿದ್ದರು.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *