ಬೆಳ್ತಂಗಡಿ: ‘ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬಾಗಿದ್ದು, ಅವರಿಗೆ ಮಾಸಿಕ ಕನಿಷ್ಠ ₹ 10 ಸಾವಿರ ಗೌರವ ಧನವನ್ನು ಏಪ್ರಿಲ್‌ನಿಂದ ನೀಡುವ ಕುರಿತು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರವೂ ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವಧನದ ಪಾಲನ್ನು ಹೆಚ್ಚಿಸಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
₹ 4 ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ಕಟ್ಟಡ ಮತ್ತು ಸಿಬ್ಬಂದಿ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶನಿವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಸಮಾಜದ ನಿರ್ಮಾಣಕ್ಕೆ ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದ್ದು, ಈ ಸಂಬಂಧ ಗ್ರಾಮೀಣ ಭಾಗಕ್ಕೆ ಸರ್ಕಾರ ಹೆಚ್ಚಿನ ಸಹಕಾರ ನೀಡುತ್ತಿದೆ. ತಾಲ್ಲೂಕು ಆಸ್ಪತ್ರೆಗಳನ್ನು ಜಿಲ್ಲಾ ಆಸ್ಪತ್ರೆಯಂತೆ ಮಾದರಿಯಾಗಿ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ. ತಾಲ್ಲೂಕು ಆಸ್ಪತ್ರೆಗಳು 24 ಗಂಟೆ ಕಾರ್ಯನಿರ್ವಹಿಸುವಂತೆ ರೂಪಿಸಲಾಗುವುದು. ಇಲಾಖೆಯಲ್ಲಿ ಸಿಬ್ಬಂದಿ ಭರ್ತಿ ಮಾಡಲಾಗುತ್ತಿದ್ದು, ಅಗತ್ಯ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಸಲಕರಣೆಗಳನ್ನೂ ಒದಗಿಸಲಾಗುವುದು’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹರೀಶ್ ಪೂಂಜ ಮಾತನಾಡಿ, ಕೊರೊನಾ ಅವಧಿಯಲ್ಲಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉನ್ನತ ಮಟ್ಟದ ಸೇವೆ ನೀಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಬದಲು ವೇತನ ನೀಡಬೇಕು. ತಾಲ್ಲೂಕು ಆಸ್ಪತ್ರೆಯಲ್ಲೂ ಕಳೆದ ಅವಧಿಯಲ್ಲಿ ಹೆಚ್ಚಿನ ಕೆಲಸಗಳನ್ನು ನಿರ್ವಹಿಸಲಾಗಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಮಚ್ಚಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಕಿಣಿ, ಉಪಾಧ್ಯಕ್ಷೆ ಸೋಮಾವತಿ, ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ, ತಾಲ್ಲೂಕು ಪಂಚಾಯಿತಿ ಇಒ ಭವಾನಿ ಶಂಕರ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಶೇಖರ್ ಕುಕ್ಕೇಡಿ, ತಾಲ್ಲೂಕು ಅಧ್ಯಕ್ಷ ಪದ್ಮನಾಭ ಸಾಲಿಯನ್, ಪೆರಾಡಿ ಪ್ಯಾಕ್ಸ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಟ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜಾತ್ ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರಮೋದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಚ್ ಒ ಡಾ.ತಿಮ್ಮಯ್ಯ ಎಚ್.ಆರ್. ಸ್ವಾಗತಿಸಿದರು. ಪ್ರಾಥಮಿಕ ಸುರಕ್ಷತಾ ಅಧಿಕಾರಿ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಮನೆ ಮನೆಗೆ ತೆರಳಿ ತಪಾಸಣೆ ನಡೆಸಿ, ಔಷಧ ನೀಡುವ ಗೃಹ ಆರೋಗ್ಯ ಯೋಜನೆ ಕೋಲಾರದಲ್ಲಿ ಜಾರಿಯಾಗಿದ್ದು, ಮಾರ್ಚ್ ವೇಳೆಗೆ ಇದನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು. ಇದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. 11 ಕೋಟಿ ಅನುದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17 ಆರೋಗ್ಯ ಕ್ಷೇಮ ಕೇಂದ್ರಗಳು ನಿರ್ಮಾಣವಾಗಲಿವೆ’ ಎಂದು ದಿನೇಶ್ ಗುಂಡೂರಾವ್ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

