Breaking News

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಕೇಂದ್ರಕ್ಕೆ ಕರ್ನಾಟಕ ಮನವಿ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಮನವಿ ಮಾಡಿದೆ.
ಭದ್ರಾ ಮೇಲ್ದಂಡೆ ಯೋಜನೆ ರಾಜ್ಯದ ಪ್ರಮುಖ ಏತ ನೀರಾವರಿ ಯೋಜನೆಯಾಗಿದೆ. ಮೊದಲ ಹಂತದಲ್ಲಿ ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ನೀರು ಎತ್ತಲಾಗಿದೆ.
ಎರಡನೇ ಹಂತದಲ್ಲಿ 29.90 ಟಿಎಂಸಿ ನೀರನ್ನು ಭದ್ರಾ ಜಲಾಶಯದಿಂದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಸೇರಿದಂತೆ ಬರಪೀಡಿತ ಜಿಲ್ಲೆಗಳ 2,25,515 ಹೆಕ್ಟೇರ್ ಪ್ರದೇಶಕ್ಕೆ ಒದಗಿಸುವ ಗುರಿ ಹೊಂದಿದೆ.
ವಾಣಿ ವಿಲಾಸ ಸಾಗರ ಜಲಾಶಯಕ್ಕೂ 2 ಟಿಎಂಸಿ ನೀರು ತುಂಬಿಸಲಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ 367 ಸಣ್ಣ ನೀರಾವರಿ ಇಲಾಖೆಯಡಿಯ ಕೆರೆಗಳನ್ನು ತುಂಬಿಸಲಾಗುತ್ತಿದೆ. ನೀರಾವರಿ ಘಟಕಗಳಲ್ಲಿನ ಲ್ಯಾಟರಲ್‌ ವೆಚ್ಚ ಹೊರತುಪಡಿಸಿ ಯೋಜನೆ ಅಂದಾಜು ವೆಚ್ಚವನ್ನು ರೂ.16,125.48 ಕೋಟಿಗೆ ಅಂತಿಮಗೊಳಿಸಲಾಗಿದೆ.
ಸಾರ್ವಜನಿಕ ಹೂಡಿಕೆ ಸಮಿತಿಯು ಈ ಯೋಜನೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಸಮಿತಿ ನೀಡಿರುವ ಶಿಫಾರಸುಗಳನ್ನು ತುರ್ತಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚಿಸಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು” ಎಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಆಗುವುದರಿಂದ ಯೋಜನೆಯ ಶೇ 60 ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದರಿಂದ ರಾಜ್ಯ ಸರ್ಕಾರದ ಮೇಲಿನ ಹೊರೆ ಕಡಿಮೆಯಾಗಲಿದೆ.
ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದಾಗಿ ರೈತರು ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದಾರೆ. ರೈತರ ಹಿತಾಸಕ್ತಿ ಕಾಪಾಡಲು ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ. ರಾಷ್ಟ್ರೀಯ ಯೋಜನೆಗೆ ಸೇರಿಸುವ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಕೇಂದ್ರದ ನೆರವು ಸಿಗದೇ ಯೋಜನೆ ಕುಂಟುತ್ತಾ ಸಾಗಿದೆ.
ಯೋಜನೆಗೆ ವೇಗ ನೀಡಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ (PMKSY-AIBP) ಅಡಿಯಲ್ಲಿ 2023-24ನೇ ಕೇಂದ್ರ ಬಜೆಟ್‌ನಲ್ಲಿ ಮೇಲ್ದಂಡೆ ಭದ್ರಾ ಯೋಜನೆಗೆ ಘೋಷಿಸಿರುವ 5300 ಕೋಟಿ ರೂ. ನೆರವು ಬಿಡುಗಡೆ ಮಾಡಲು ಕೋರಲಾಗಿದೆ.
ಕೃಷ್ಣಾ ಮೇಲ್ದಂಡೆ ಅಧಿಸೂಚನೆ ಪ್ರಕಟಿಸಲು ಮನವಿ:
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ-2 ಆದೇಶದಂತೆ ಕರ್ನಾಟಕಕ್ಕೆ 173 ಟಿಎಂಸಿ ನೀರು ಹಂಚಿಕೆಯಾಗಿದೆ. ಇದರಡಿ ಮೂರನೇ ಹಂತದ ಮೇಲ್ದಂಡೆ ಕೃಷ್ಣಾ ಯೋಜನೆಗೆ 130 ಟಿಎಂಸಿ ಹಂಚಿಕೆ ಮಾಡಲಾಗಿದೆ. ಈ ಯೋಜನೆ ಅನುಷ್ಠಾನದಿಂದ ಉತ್ತರ ಕರ್ನಾಟಕದ ಬರ ಪೀಡಿತ ಪ್ರದೇಶದ 7 ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್‌ಗಳಿಗೆ ನೀರಾವರಿ ಒದಗಿಸುವ ಗುರಿ ಇದೆ. ಯೋಜನೆಗಾಗಿ ಆಡಳಿತಾತ್ಮಕ ಅನುಮೋದಿತ ವೆಚ್ಚ ರೂ. 51,148.94 ಕೋಟಿ ಮೀಸಲಿಡಲಾಗಿದೆ. ಆಲಮಟ್ಟಿ ಜಲಾಶಯದಲ್ಲಿನ ಸಂಗ್ರಹವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವ ಉದ್ದೇಶ ಹೊಂದಿದ. ಜಲಾಶಯದ ಹಿನ್ನೀರಿನಲ್ಲಿರುವ 20 ಹಳ್ಳಿಗಳ 1.34 ಲಕ್ಷ ಎಕರೆ ಭೂಸ್ವಾಧೀನ ಮತ್ತು ಪುನರ್ವಸತಿಯನ್ನು ಒಳಗೊಂಡಿದೆ. ನ್ಯಾಯಮಂಡಳಿ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಿಲ್ಲ.
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿಯ ತೀರ್ಪನ್ನು ಪ್ರಕಟಿಸಲು ಅನುಮತಿ ಕೋರಿ ಸೂಕ್ತ ಅರ್ಜಿ ಅಥವಾ ಅಫಿಡವಿಟ್ ಸಲ್ಲಿಸುವ ಮೂಲಕ ಸುಪ್ರೀಂಕೋರ್ಟ್‌ಗೆ ಮತ್ತೊಮ್ಮೆ ಮನವಿ ಮಾಡಲಾಗಿದೆ. 1956 ರ ಕಾಯಿದೆಯ ಸೆಕ್ಷನ್ 6(1) ರ ಅಡ 2013 ರ ವರದಿ ಮತ್ತು ಕೃಷ್ಣಾ ಜಲವಿವಾದ ನ್ಯಾಯಾಧೀಕರಣ-II ರ ತೀರ್ಪು ಪ್ರಕಟಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆಯ ಡಿಪಿಆರ್‌ ಅನುಮೋದಿಸಲು ಮನವಿ:
ಮೇಕೆದಾಟು ಯೋಜನೆಯಡಿ ಸುಮಾರು 67.16 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಉದ್ದೇಶದೊಂದಿಗೆ ವಿಸ್ತ್ರತ ಯೋಜನಾ ವರದಿ ತಯಾರಿಸಲಾಗಿದೆ. ಇದಕ್ಕೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ಕೋರಿದೆ.
ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಕಾವೇರಿಯಿಂದ ಹೆಚ್ಚುವರಿಯಾಗಿ ಹಂಚಿಕೆಯಾಗಿರುವ 4.75 ಟಿಎಂಸಿ ನೀರನ್ನು ಬಳಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಮೇಕೆದಾಟು ಯೋಜನೆ ಕುರಿತು ಸುಪ್ರೀಂಕೋರ್ಟ್‌ ಅಭಿಪ್ರಾಯ ಕೇಳಿದೆ. ಮೇಕೆದಾಟು ಸಮಸ್ಯೆಯನ್ನು ಸುಮಾರು 5 ವರ್ಷಗಳ ಕಾಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲಿ ಚರ್ಚಿಸಲಾಗಿದೆ. 2024 ಫೆಬ್ರವರಿಯಲ್ಲಿ ನಡೆದ ಪ್ರಾಧಿಕಾರದ 28 ನೇ ಸಭೆಯಲ್ಲಿ ಮೇಕೆದಾಟು ಯೋಜನೆ ಕಾರ್ಯಸಾಧ್ಯತೆ ಕುರಿತ ವರದಿಯಲ್ಲಿ ತಾಂತ್ರಿಕ/ಆರ್ಥಿಕ ಅಂಶಗಳನ್ನು ಪರಿಶೀಲಿಸಲು ವರದಿಯನ್ನು ವಾಪಸ್‌ ಕಳುಹಿಸಲಾಗಿತ್ತು. ಈಗ ಪರಿಷ್ಕೃತ ಹಾಗೂ ವಿಸ್ತೃತವಾದ ಡಿಪಿಆರ್‌ ಸಿದ್ದಪಡಿಸಿದ್ದು ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕರ್ನಾಟಕ ಮನವಿ ಮಾಡಿದೆ.
ಕಾವೇರಿ ನ್ಯಾಯಾಧೀಕರಣವು ಮೇಕೆದಾಟು ಯೋಜನೆಯ ವಿರೋಧಿಸಿಲ್ಲ. ಅಂತಿಮ ಆದೇಶದ ಷರತ್ತಿಗೊಳಪಟ್ಟು ಯೋಜನೆಗೆ ಚಾಲನೆ ನೀಡಲಾಗುವುದು. ಉದ್ದೇಶಿತ ಮೇಕೆದಾಟು ಯೋಜನೆಯು ಕರ್ನಾಟಕದ ಪ್ರಾದೇಶಿಕ ಮಿತಿಯೊಳಗೆ ಇದೆ ಎಂಬ ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಇದು ಪ್ರಾಥಮಿಕವಾಗಿ ಕುಡಿಯುವ ನೀರು ಸರಬರಾಜು ಯೋಜನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದ್ದಾರೆ.

Share News

About bigtvnews22

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *