ಹುಬ್ಬಳ್ಳಿ ನಗರದಲ್ಲಿ ಶಾಕ್ ನೀಡುವಂತಹ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬುದ್ದಿ ಮಾತು ಹೇಳಿದ್ದಕ್ಕೆ ವ್ಯಕ್ತಿಯೋರ್ವನನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯ ಗೌಶಿಯಾ ಟೌನ್‌ನಲ್ಲಿ ಕಳೆದ ರಾತ್ರಿ ನಡೆದಿದೆ.ಕೊಲೆಯಾದ ವ್ಯಕ್ತಿಯನ್ನು ಅಹ್ಮದ್ ರಜಾಕ್ ಶಹಪೂರ್ (48) ಎಂದು ಗುರುತಿಸಲಾಗಿದ್ದು, ಅವರು ಹಳೆ ಹುಬ್ಬಳ್ಳಿ ನಿವಾಸಿಯಾಗಿದ್ದು, ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಆರೋಪಿ ಸದ್ದಾಂ ಎಂಬಾತ ಅಹ್ಮದ್ ರಜಾಕ್ ಅವರ ಸಹೋದರನ ಮಗಳ ಪತಿಯಾಗಿದ್ದು, ಪತ್ನಿಯನ್ನು ಕರೆದುಕೊಂಡು ಹೋಗಲು ರಾತ್ರಿ ಮನೆ ಬಳಿ ಬಂದಿದ್ದ. ಈ ವೇಳೆ ಮನೆ ಹೊರಗಡೆ ಗಲಾಟೆ ಮಾಡುತ್ತಿದ್ದ ಸದ್ದಾಂಗೆ ಅಹ್ಮದ್ ರಜಾಕ್ ಬುದ್ದಿ ಮಾತು ಹೇಳಲು ಮುಂದಾದಾಗ, ಆಕ್ರೋಶಗೊಂಡ ಆರೋಪಿ ದಿಢೀರನೆ ಕಲ್ಲಿನಿಂದ ಹೊಡೆದು ಹತ್ಯೆ ನಡೆಸಿದ್ದಾನೆ. ಈ ಸಂಬಂಧ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಹುಬ್ಬಳ್ಳಿ ನಗರದಲ್ಲಿ ಮತ್ತೆ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನೆಗಳು ಎದ್ದಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

