ಬೆಂಗಳೂರು: ಖಾಲಿ ನಿವೇಶನದಲ್ಲಿ ಜೆಲಿಟಿನ್ ಕಡ್ಡಿ ಸ್ಫೋಟಗೊಂಡಿರುವ ಘಟನೆ ಹುಳಿಮಾವು ಠಾಣೆ ವ್ಯಾಪ್ತಿಯ ಅಕ್ಷಯ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ನಾರಾಯಣ ಎಂಬುವರಿಗೆ ಸೇರಿ ಖಾಲಿ ನಿವೇಶನದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. ಅಕ್ಷಯ ನಗರದ ರೆಸಿಡೆನ್ಸಿಯಲ್ ಪ್ರದೇಶದಲ್ಲಿ ನಾರಾಯಣ ಎಂಬುವರಿಗೆ ಸೇರಿದ 100-100 ನಿವೇಶನ ಇದ್ದು, ಅದರಲ್ಲಿ ಪತ್ತೆಯಾದ ಕಲ್ಲು ಬಂಡೆ ಸ್ಫೋಟಗೊಳಿಸಲು ಗುತ್ತಿಗೆದಾರ ಹತ್ತಾರು ಜೆಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟಗೊಳಿಸಿದ್ದಾನೆ. ಪರಿಣಾಮ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆಯಾಗಿತ್ತು. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿದೆ. ಸ್ಥಳದಲ್ಲಿ ಪತ್ತೆಯಾದ 15 ಜೆಲೆಟಿನ್ ಕಡ್ಡಿಗಳು ಹಾಗೂ 30 ಡಿಟೋನೆಟರ್, ಟ್ರ್ಯಾಕ್ಟರ್, ಜೆಸಿಬಿ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಗುತ್ತಿಗೆದಾರ ಹಾಗೂ ನಿವೇಶನ ಮಾಲಿಕನ ವಿರುದ್ಧ ಸ್ಫೋಟಕ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

