ಕಾರವಾರ: ಶಿರಸಿಯ ಕೆಎಚ್‌ಬಿ ಕಾಲೋನಿಯಲ್ಲಿ ಎರಡನೇ ಮದುವೆಗೆ ಸಿದ್ದನಾಗಿದ್ದ ವೈದ್ಯನನ್ನು ಹತ್ಯೆ ಮಾಡಿದ ಆರೋಪಿಯನ್ನು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ ಮಂಜುನಾಥ್ ಪಾಂಡುರಂಗ ನಾಯ್ಕ(68) ಬಂಧಿತ ಆರೋಪಿ. ಡಾ. ರಮೇಶ್ ಕಲಗುಟಕರ(51) ಕೊಲೆಯಾದ ವೈದ್ಯ. ವೈದ್ಯ ರಮೇಶ್ ಅವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ರಮೇಶ್ ಸ್ನೇಹಿತನಾಗಿರುವ ಮಂಜುನಾಥ್ ಚಿನ್ನದ ಆಸೆಗೆ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ರಮೇಶ್ ಅವರ ಬಳಿ ಚಿಕಿತ್ಸೆಗಾಗಿ ಅನೇಕ ಬಾರಿ ಬಂದಿದ್ದ ಮಂಜುನಾಥ್ ಸ್ನೇಹಿತನಾಗಿದ್ದ. ರಮೇಶ್ ಹಲವು ಬಾರಿ ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಏ. 20ರಂದು ರಮೇಶ್ ಅವರ ಎರಡನೇ ಮದುವೆ ನಡೆಯಬೇಕಿತ್ತು. ಶನಿವಾರ ಅವರು ಬ್ಯಾಂಕಿಗೆ ಹೋಗಿ ಚಿನ್ನಾಭರಣ ಬಿಡಿಸಿಕೊಂಡು ಮನೆಗೆ ತಂದಿದ್ದರು. ಸ್ನೇಹಿತನಾಗಿದ್ದ ಆರೋಪಿಗೆ ಚಿನ್ನಾಭರಣ ತೋರಿಸಿದ್ದರು. ರಾತ್ರಿ ವೇಳೆ ವೈದ್ಯ ರಮೇಶ್ ಮಲಗಿದ್ದಾಗ ಆಯುಧದಿಂದ ಬಲವಾಗಿ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಆರೋಪಿಯನ್ನು ಹತ್ಯೆ ನಡೆದ 24 ಗಂಟೆಯೊಳಗೆ ಚಿನ್ನಾಭರಣ ಸಹಿತ ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

