ಬೆಂಗಳೂರು: ಹಣಕ್ಕಾಗಿ ಅಪಹರಣ ಹಾಗೂ ಕ್ರಿಮಿನಲ್ ಸಂಚು ರೂಪಿಸಿದ ಅಪರಾಧಕ್ಕಾಗಿ ಬೆಂಗಳೂರಿನ ನ್ಯಾಯಾಲಯವೊಂದು ತಮಿಳುನಾಡು ಮೂಲದ ಶಂಕರ್ ಆರ್ಮುಗಮ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದರಂತೆ ಈತ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ. ಆದರೆ, ಜೈಲಿನಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಸಿನಿಮೀಯ ಶೈಲಿಯ ಮಾಸ್ಟರ್ ಪ್ಲಾನ್ ಮಾಡಿದ್ದ ಈ ಚಾಣಾಕ್ಷ ಖೈದಿ, ಸುಪ್ರೀಂ ಕೋರ್ಟ್ ಹೆಸರಿನಲ್ಲೇ ಬಿಡುಗಡೆಯ ನಕಲಿ ಆದೇಶ ಪತ್ರ ಮತ್ತು ಮುದ್ರೆಯನ್ನು ಸೃಷ್ಟಿಸಿದ್ದ. ಇದನ್ನು ನಂಬಿದ ಕಾರಾಗೃಹದ ಸಿಬ್ಬಂದಿ 2018ರಲ್ಲಿ ಆತನನ್ನು ಬಿಡುಗಡೆ ಮಾಡಿದ್ದರು. ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಆತ ರಾಜಾರೋಷವಾಗಿ ಜೈಲಿನಿಂದ ಹೊರನಡೆದಿದ್ದ. ಆ ಬಳಿಕ ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಿಗೆ ಬಂದ ಅನಾಮಧೇಯ ಪತ್ರವೊಂದು ಈ ಇಡೀ ಹಗರಣವನ್ನು ಬಹಿರಂಗಪಡಿಸಿದೆ. ಇಲಾಖೆಯ ಆಂತರಿಕ ತನಿಖೆಯಲ್ಲಿ ಸುಪ್ರೀಂ ಕೋರ್ಟ್‌ನಿಂದ ಅಂತಹ ಯಾವುದೇ ಆದೇಶ ಬಂದಿಲ್ಲ ಎಂಬ ಕಹಿ ಸತ್ಯ ಎಂಟು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಹೊಸ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಶಂಕರ್‌ಗಾಗಿ ಹುಡುಕಾಟ ನಡೆದಿದೆ. ಈ ಘಟನೆಯು ಜೈಲು ಅಧಿಕಾರಿಗಳ ಕರ್ತವ್ಯ ಲೋಪ ಅಥವಾ ಆರೋಪಿಯೊಂದಿಗೆ ಅಧಿಕಾರಿಗಳು ಶಾಮೀಲಾಗಿರುವ ದೊಡ್ಡ ಅನುಮಾನವನ್ನು ಹುಟ್ಟುಹಾಕಿದ್ದು, ಆ ಆಯಾಮದಲ್ಲೂ ತನಿಖೆ ಚುರುಕುಗೊಂಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

