ಭೋಪಾಲ್: ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಗೆ ನೀಡಿದ್ದ ಪೌಷ್ಟಿಕ ಆಹಾರದ ಪ್ಯಾಕೆಟ್ ನಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಪಾಂಡುರ್ಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕಾರ್ಘಾಟ್ ಕಮಠಿ ಗ್ರಾಮದ ಗರ್ಭಿಣಿ ವಚಲಾ ಬಾಯಿ ಧುರ್ವೆ ಅವರಿಗೆ ಅಂಗನವಾಡಿ ಕೇಂದ್ರದಿಂದ ಪೌಷ್ಟಿಕ ಆಹಾರದ ಲಡ್ಡುಗಳ ಪ್ಯಾಕೆಟ್ ನೀಡಲಾಗಿತ್ತು. ಅದರಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿದೆ. ಮನೆಗೆ ತೆಗೆದುಕೊಂಡು ಹೋಗಿ ಪ್ಯಾಕೆಟ್ ತೆರೆದಾಗ ಅದರೊಳಗೆ ಇದ್ದ ಸತ್ತ ಹಾವಿನ ಮರಿ ಕಂಡು ಕಂಗಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಅಂಗನವಾಡಿ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆಹಾರದ ಪ್ಯಾಕೆಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನಾ ವರದಿ ಸಿದ್ಧಪಡಿಸಿದ್ದಾರೆ. ಅಲ್ಲದೆ, ಆಹಾರದ ಮಾದರಿಯನ್ನು ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ಪ್ರಕರಣದ ತನಿಖೆಗೆ ಐವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಆಹಾರದ ಮಾದರಿಯನ್ನು ಭೋಪಾಲ್‌ನ ರಾಜ್ಯ ಆಹಾರ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

