ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪೊಲೀಸ್ ಇಲಾಖೆ ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಖಾಲಿ ಇರುವ 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಒಟ್ಟು 2,266 ಹುದ್ದೆಗಳು ಮಹಿಳಾ ಅಭ್ಯರ್ಥಿಗಳಿಗಾಗಿ ಮೀಸಲಿರಿಸಲಾಗಿದೆ. ಜೊತೆಗೆ ತೃತೀಯ ಲಿಂಗಿಗಳಿಗೂ 35 ಹುದ್ದೆಗಳನ್ನು ಮೀಸಲಿಟ್ಟು ವಿಶೇಷ ಅವಕಾಶ ಕಲ್ಪಿಸಲಾಗಿದೆ. ಪುರುಷ ಅಭ್ಯರ್ಥಿಗಳಿಗೆ 755 ಹುದ್ದೆಗಳು, ಮಾಜಿ ಸೈನಿಕರಿಗೆ 257 ಹುದ್ದೆಗಳು ಹಾಗೂ ಮಹಿಳಾ ಸೇವಾ ಸಿಬ್ಬಂದಿಗೆ 82 ಹುದ್ದೆಗಳು ಮೀಸಲಾಗಿದೆ. ತೃತೀಯ ಲಿಂಗಿಗಳಿಗೆ ಬೆಂಗಳೂರು ನಗರದಲ್ಲಿ 25 ಹುದ್ದೆಗಳು ಸೇರಿದಂತೆ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮಂಡ್ಯ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಲಾ ಒಂದು ಹುದ್ದೆ ನೀಡಲಾಗಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ ವರ್ಗದವರಿಗೆ 18 ರಿಂದ 33 ವರ್ಷ ಹಾಗೂ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಜೂನ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 3 ಕೊನೆಯ ದಿನವಾಗಿದೆ. ಲಿಖಿತ ಪರೀಕ್ಷೆ ಆಗಸ್ಟ್ 2ರಂದು ನಡೆಯಲಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 2,015 ಹುದ್ದೆಗಳು ಖಾಲಿ ಇದ್ದು, ಮಂಗಳೂರು, ಮಂಡ್ಯ, ಶಿವಮೊಗ್ಗ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ನೇಮಕಾತಿ ನಡೆಯಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

