ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಒಂದೂವರೆ ವರ್ಷದ ಮಗುವಿನೊಂದಿಗೆ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ತೆರೆದ ಬಾವಿಯಲ್ಲಿ ಮೃತಪಟ್ಟಿರುವ ದುರಂತ ಸಂಭವಿಸಿದೆ. ಮೃತರನ್ನು ಅಂಬಿಕಾ (25) ಹಾಗೂ ಅವರ ಪುತ್ರ ಆರಾಧ್ಯ ಎಂದು ಗುರುತಿಸಲಾಗಿದೆ. ಮಂಗಳವಾರ ಮನೆಯಿಂದ ಹೊರಟಿದ್ದ ಅಂಬಿಕಾ ಮನೆಗೆ ವಾಪಸ್ ಬಾರದೇ ಇದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಎರಡು ದಿನಗಳ ಬಳಿಕ ಬಾವಿಯ ಬಳಿ ಅವರ ಚಪ್ಪಲಿ ಪತ್ತೆಯಾಗಿದ್ದು, ಶೋಧ ನಡೆಸಿದಾಗ ತಾಯಿ ಮತ್ತು ಮಗುವಿನ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿವೆ. ಮಾಹಿತಿ ಪಡೆದ ನರೋಣಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

