ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ಸರ್ಕಾರದ ಟೌನ್‌ಶಿಪ್ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ ತೀವ್ರ ಸ್ವರೂಪ ಪಡೆದುಕೊಂಡಿತು. ಜೆಎಂಸಿ ಸರ್ವೇಗೆ ಆಗಮಿಸಿದ್ದ ಅಧಿಕಾರಿಗಳನ್ನು ಮಹಿಳಾ ರೈತರು ತಡೆದು, ಅವರ ಕಾರಿನ ಮೇಲೆ ದಾಳಿ ನಡೆಸಿದರು. ಕೆಲವರು ಪೊರಕೆಯಿಂದ ಅಧಿಕಾರಿಗಳನ್ನು ಓಡಿಸಲು ಯತ್ನಿಸಿದರೆ, ಕಲ್ಲು ಮತ್ತು ದೊಣ್ಣೆ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮಂಡಲಹಳ್ಳಿ ಗ್ರಾಮದಲ್ಲಿ ಸರ್ವೇ ನಡೆಸಲು ಅಧಿಕಾರಿಗಳು ಮುಂದಾದ ವೇಳೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತು. ಅಧಿಕಾರಿಗಳು ಜನರ ಗಮನ ತಪ್ಪಿಸಿ ಬೇರೆ ಸ್ಥಳದಲ್ಲಿ ಸರ್ವೇ ನಡೆಸಲು ಯತ್ನಿಸಿದ್ದೇ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು ಎಂದು ಆರೋಪಿಸಲಾಗಿದೆ. ಈ ವೇಳೆ ರೈತರು, “ಸ್ಥಳೀಯರು ಜಮೀನು ನೀಡಲು ಒಪ್ಪಿದ್ದಾರೆ” ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ತಳ್ಳಿಹಾಕಿದರು. ಸರ್ಕಾರ ಯೋಜನೆಯಿಂದ ಹಿಂದೆ ಸರಿಯಬೇಕು, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ನೀಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

