ಕೋಲಾರ ಜಿಲ್ಲೆಯ ಛತ್ರಕೋಡಿಹಳ್ಳಿ ಸಮೀಪ ಸಾಲದ ಬಾಧೆಯಿಂದ ಮನನೊಂದ ತಾಯಿಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಪ್ರಮೀಳ (40), ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಮೃತರು. ಕುಟುಂಬವು ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಸುಮಾರು ₹15 ಲಕ್ಷ ಸಾಲ ಮಾಡಿಕೊಂಡಿದ್ದು, ಖಾಸಗಿ ಫೈನಾನ್ಸ್ ಹಾಗೂ ಸಂಘ-ಸಂಸ್ಥೆಗಳ ಸಾಲದ ಒತ್ತಡ ಹೆಚ್ಚಾಗಿತ್ತು. ಇದೇ ವಿಚಾರವಾಗಿ ರಾತ್ರಿ ಪತಿ ಸುರೇಶ್ ಅವರೊಂದಿಗೆ ಗಲಾಟೆ ನಡೆದ ಬಳಿಕ, ಪ್ರಮೀಳ ಇಬ್ಬರು ಮಕ್ಕಳೊಂದಿಗೆ ಮನೆಯಿಂದ ತೆರಳಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆಟೋ ಚಾಲಕರಾಗಿರುವ ಸುರೇಶ್ ರಾತ್ರಿ ಪತ್ನಿ ಮತ್ತು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದು, ಬೆಳಗ್ಗೆ ಮೂವರ ಮೃತದೇಹಗಳು ಕೃಷಿ ಹೊಂಡದಲ್ಲಿ ಪತ್ತೆಯಾಗಿವೆ. ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

