ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, 2021ರಿಂದ 2026ರ ಜುಲೈ ಅಂತ್ಯದವರೆಗೆ ಒಟ್ಟು 15,578 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 2,271 ಪ್ರಕರಣಗಳು ದಾಖಲಾಗಿದ್ದು, ಪರಿಚಯಸ್ಥರು, ಕುಟುಂಬಸ್ಥರು ಹಾಗೂ ಸಂಬಂಧಿಕರಿಂದಲೇ ಹೆಚ್ಚಿನ ದೌರ್ಜನ್ಯ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 2025ರಲ್ಲಿ 3,099 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಕಾನೂನು ಅರಿವು ಹೆಚ್ಚಿರುವುದರಿಂದ ದೂರುಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ತಿಳಿಸಿದ್ದಾರೆ. ಮಕ್ಕಳಿಗೆ ಶೀಘ್ರ ನ್ಯಾಯ ಒದಗಿಸಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ. ತನಿಖೆಯನ್ನು 60 ದಿನಗಳಲ್ಲಿ ಪೂರ್ಣಗೊಳಿಸುವುದು, ತ್ವರಿತಗತಿ ನ್ಯಾಯಾಲಯಗಳ ಸ್ಥಾಪನೆ, ಜಿಲ್ಲೆಗಳಲ್ಲಿ ‘ಅಕ್ಕ ಪಡೆ’ ರಚನೆ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

