ಬೆಂಗಳೂರು: ₹10 ಲಕ್ಷ ನೀಡಿದರೆ ₹1 ಕೋಟಿ ನೀಡುವುದಾಗಿ ನಂಬಿಸಿ, ಮೂಟೆಗಳಲ್ಲಿ ಹಣ ತೋರಿಸಿ ಹಲವರಿಂದ ₹4.5 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ಹೊಸಕೋಟೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಯಳಚೇನಹಳ್ಳಿ ಶಶಿಕುಮಾರ್ ಪ್ರಮುಖ ಆರೋಪಿ. ಶಶಿಕುಮಾರ್ ಜಮೀನು ತೋರಿಸಿ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಶ್ರೀಮಂತರ ವಿಶ್ವಾಸ ಗಳಿಸಿದ್ದ. ಬಳಿಕ ‘ಆರ್‌ಬಿಐ ಮ್ಯಾನೇಜರ್’ ಎಂದು ವ್ಯಕ್ತಿಯೊಬ್ಬರನ್ನು ಪರಿಚಯಿಸಿ, ವಿಡಿಯೋ ಕಾಲ್‌ನಲ್ಲಿ ಮೂಟೆಗಳಲ್ಲಿ ಹಣ ತೋರಿಸುತ್ತಿದ್ದ. ತಮಗೆ ಜಯಲಲಿತಾ ಅವರ ಬೇನಾಮಿ ಆಸ್ತಿ ಬಂದಿದೆ ಎಂದು ಹೇಳಿ ಹಣ, ಚೆಕ್ ಹಾಗೂ ಚಿನ್ನಾಭರಣ ಪಡೆದು ವಂಚಿಸಿದ್ದಾನೆ ಎನ್ನಲಾಗಿದೆ. ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ನಾಗೇಶ್, ಪ್ರಮೀಳಾ ಶಶಿಕುಮಾರ್, ಅಂಬುಜಾ ಶಶಿಕುಮಾರ್ ಹಾಗೂ ವೆಂಕಟರವಣಪ್ಪ ಅವರನ್ನು ಬಂಧಿಸಿದ್ದಾರೆ. ವಂಚನೆಯ ಹಣದಲ್ಲಿ ವಾಹನ ಮತ್ತು ಜಮೀನು ಖರೀದಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇನ್ನಷ್ಟು ಮಂದಿ ದೂರು ನೀಡುವ ಸಾಧ್ಯತೆಯಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
