ಬೆಂಗಳೂರು: ವಿದ್ಯಾರಣ್ಯಪುರದ ಸ್ಪಾವೊಂದಕ್ಕೆ ನುಗ್ಗಿದ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಯುವಕರ ತಂಡ ನೈತಿಕ ಪೊಲೀಸ್‌ಗಿರಿ ನಡೆಸಿ ಹಣಕ್ಕಾಗಿ ಬೆದರಿಸಿ ಸುಲಿಗೆ ಮಾಡಿದ ಘಟನೆ ನಡೆದಿದೆ. ಅಕ್ಟೋಬರ್ 3ರಂದು ರಾತ್ರಿ ‘ಮೈ ಸಲೂನ್ ಅಂಡ್ ಸ್ಪಾ’ಗೆ ನುಗ್ಗಿದ ಆರೋಪಿಗಳು, ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಸ್ಪಾದ ಹೆಸರು ಕೆಡಿಸುವುದಾಗಿ ಬೆದರಿಸಿದ್ದಾರೆ. ಆರಂಭದಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟ ತಂಡ, ಬಳಿಕ ₹1.5 ಲಕ್ಷಕ್ಕೆ ಚೌಕಾಶಿ ಮಾಡಿದೆ. ಹೆದರಿದ ಸಿಬ್ಬಂದಿ ₹1 ಲಕ್ಷ ನೀಡಿದ್ದು, ಉಳಿದ ₹50 ಸಾವಿರವನ್ನು ಶೀಘ್ರ ನೀಡುವಂತೆ ಆರೋಪಿಗಳು ಎಚ್ಚರಿಸಿದ್ದಾರೆ. ಈ ವೇಳೆ ಸ್ಪಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಲೀಕರಾದ ನಯನಾ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

