ಬೆಂಗಳೂರು: ರಫೇಲ್ ವಿಮಾನ ಖರೀದಿ ಅವ್ಯವಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈವಾಡ ಇರೋದು ಗೊತ್ತಾಗಿದೆ. ಹೀಗಾಗಿ ಪ್ರಧಾನಿಯವರು ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಇದನ್ನ ಈಗ ಫ್ರಾನ್ಸ್ ಮಾಜಿ ಅಧ್ಯಕ್ಷರೂ ಕೂಡ ಹೇಳಿದ್ದಾರೆ. ಇದರ ಹೊಣೆ ಪ್ರಧಾನಿಯವರೇ ಹೊರಬೇಕು. ಪ್ರಧಾನಿ ಮೋದಿಯವರ ಕೈವಾಡ ಇರೋದು ಗೊತ್ತಾಗಿದೆ. ಹೀಗಾಗಿ ಜಂಟಿ ಪಾರ್ಲಿಮೆಂಟರಿ ಕಮಿಟಿಯಿಂದ ಈ ಬಗ್ಗೆ ತನಿಖೆಯಾಗಬೇಕು. ಮೋದಿ ಅವರ ಪಕ್ಷದ ಬೇರೆಯವರಿಗೆ ಸ್ಥಾನ ಬಿಟ್ಟು ಹೋಗಲಿ ಎಂದರು.
ಪ್ರಧಾನಿ ತಮಗೆ ಬೇಕಾದವರನ್ನ ಜೊತೆಯಲ್ಲೇ ಕರೆದೊಯ್ದಿದ್ದಾರೆ. ಹೆಚ್ಎಎಲ್ಗೆ ಸಿಗಬೇಕಾದ ಟೆಂಡರ್ ಅಂಬಾನಿಗೆ ಕೊಡಿಸಿದ್ದಾರೆ ಎಂದು ಆರೋಪಿಸಿದ್ರು. ರಫೇಲ್ ವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿರುವುದನ್ನ ನಾವು ಹೇಳುತ್ತಲೇ ಇದ್ದೇವೆ. ಎಐಸಿಸಿ ರಾಹುಲ್ ಗಾಂಧಿ ಅವರು ಇದರ ಬಗ್ಗೆ ದೊಡ್ಡ ಧ್ವನಿ ಎತ್ತಿದ್ದರು. ಆಗ ಈ ವಿಚಾರವನ್ನ ಎಲ್ಲರೂ ಅಲ್ಲಗಳೆದಿದ್ದರು. ಬಿಜೆಪಿ ಸಂಸದರು, ನಾಯಕರು ಅಲ್ಲಗಳೆದಿದ್ದರು. ಆದ್ರೆ ಇದೀಗ ಅದೇ ವಿಚಾರ ನಿಜವಾಗಿದೆ. ರಫೇಲ್ ವಿಮಾನ ಖರೀದಿಯಲ್ಲಿ ₹ 25 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಸಿಎಂ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ
ಇದೇ ವೇಳೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ದಂಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಿಎಂ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಹಾಗೇ ಹೇಳಿಲ್ಲ ಅಂತಾ ಸಿಎಂ ಅವರೇ ಹೇಳಿದ್ದಾರೆ ಎಂದರು.
ಬಿಜೆಪಿಯವರಿಗೆ ಬೇರೆ ಕೆಲಸವೇ ಇಲ್ಲಾ? ಸಿಎಂ ದಂಗೆ ಹೇಳಿಕೆ ಕುರಿತು ರಾಜ್ಯಪಾಲರಿಗೆ ದೂರ ಕೊಡ್ತಾರೆ, ಕೇಂದ್ರಕ್ಕೂ ದೂರು ಕೊಡ್ತಾರೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದೆ ಅಂತ ಹೆದರಿಸುತ್ತಾರೆ. ಇದು ಬಿಜೆಪಿ ನಾಯಕರ ಸರ್ವಾಧಿಕಾರಿ ಮನಸ್ಥಿತಿ ತೊರಿಸುತ್ತದೆ ಎಂದು ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ
bigtvnews | Hubli Dharwad News | Kannada News | Karnataka News Hubli News | News In Hubli | Local news





