ಬೆಂಗಳೂರು: ವಿಶೇಷ ಚೇತನ ಮತದಾರರು ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ, ಇವರಿಗೆಂದೇ ವಿಶಿಷ್ಟ ಯೋಜನೆಯನ್ನು ಚುನಾವಣಾ ಆಯೋಗ ಪರಿಚಯಿಸಿದೆ. ಇದರ ಅಡಿಯಲ್ಲಿ ವಿಶೇಷ ಚೇತನರನ್ನು ಮನೆಯಿಂದ ಮತಗಟ್ಟೆಗೆ ಕರೆ ತರುವುದು ಹಾಗೂ ಮತದಾನದ ಬಳಿಕ ಅವರನ್ನು ವಾಪಸ್ ಬಿಡಲಾಗುವುದು. ದೇಶದಲ್ಲಿಯೇ ಇದೊಂದು ಪ್ರಥಮ ಹಾಗೂ ನೂತನ ಪರಿಕಲ್ಪನೆಯಾಗಿದ್ದು, ನವಂಬರ್ 3 ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಜಾರಿಯಲ್ಲಿರಲ್ಲಿದೆ. ಬಳಿಕ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಿ ದೇಶಾದ್ಯಂತ ವಿಸ್ತರಿಸಲಾಗುವುದು ಅಂತಾ ಚುನಾವಣಾ ಆಯೋಗ ಹೇಳಿದೆ.ಇದಕ್ಕಾಗಿ ‘ಚುನಾವಣಾ’ ಹೆಸರಿನ ಮೊಬೈಲ್ ಆ್ಯಪ್ ಕೂಡ ಸಿದ್ಧವಾಗಿದೆ. ಲೋಕಸಭಾ ಕ್ಷೇತ್ರಗಳಾದ ಶಿವಮೊಗ್ಗ, ಮಂಡ್ಯ, ಬಳ್ಳಾರಿ ಹಾಗೂ ವಿಧಾನಸಭಾ ಕ್ಷೇತ್ರಗಳಾದ ರಾಮನಗರ ಮತ್ತು ಜಮಖಂಡಿಯ ವಿಶೇಷ ಚೇತನ ಮತದಾರರು, ಈ ಮೊಬೈಲ್ ಆ್ಯಪ್ನಲ್ಲಿ ತಮ್ಮ ಹೆಸರು, ವಿಳಾಸ ಹಾಗೂ ವೋಟರ್ ಐಡಿ ನಂಬರ್ನ್ನ ನಮೂದಿಸಬೇಕು. ನಿನ್ನೆ ಬೆಳಗ್ಗೆ 6 ಗಂಟೆಯಿಂದ ಈ ಯೋಜನೆಗೆ ಚಾಲನೆ ದೊರೆತಿದ್ದು, ಮತದಾರರು ನವಂಬರ್ 1ರ ತಡರಾತ್ರಿ 1 ಗಂಟೆಯೊಳಗೆ ತಮ್ಮ ವಿಳಾಸವನ್ನು ಆ್ಯಪ್ನಲ್ಲಿ ನಮೂದಿಸಬೇಕು. ಬಳಿಕ, ಚುನಾವಣಾ ಸಿಬ್ಬಂದಿ ನ.3ರಂದು ಮೊಬೈಲ್ ಆ್ಯಪ್ನಲ್ಲಿ ನೀವು ಕೊಟ್ಟ ವಿಳಾಸಕ್ಕೆ ಬಂದು ನಿಮ್ಮನ್ನು ಮತದಾನಕ್ಕೆ ಕರೆದೊಯ್ಯುತ್ತಾರೆ.ಇನ್ನು, ಈ ವಿಶಿಷ್ಟ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ಗೆ ಸಲ್ಲುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೇ ಈ ಯೋಜನೆ ಜಾರಿಗೊಳಿಸಲು ಮುಂದಾಗಿದ್ದರು. ಆದ್ರೆ, ಕೆಲ ರಾಜಕಾರಣಿಗಳು ಯೋಜನೆ ಮಿಸ್ ಯೂಸ್ ಆಗುವ ಆತಂಕ ವ್ಯಕ್ತಪಡಿಸಿದ್ದರಿಂದ ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





