ಹೊಸಕೋಟೆ: ಚಿಟ್ ಫಂಡ್ ಹೆಸರಿನಲ್ಲಿ 6 ಕೋಟಿಗೂ ಹೆಚ್ಚು ಹಣ ವಂಚಿಸಿದ್ದ ಆರೋಪಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ಬಂಧಿಸಲಾಗಿದೆ.

ಆಂಧ್ರದ ಮದನಪಲ್ಲಿ ಮೂಲದ ಪಾಪಣ್ಣ ಅಲಿಯಾಸ್ ರೆಡ್ಡಿ 400ಕ್ಕೂ ಹೆಚ್ಚು ಜನರಿಗೆ ಉಂಡೆನಾಮ ತಿಕ್ಕಿ ಪರಾರಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪಾಪಣ್ಣ ಸೂಲಿಬಲೆಯಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಪ್ರತಿ ತಿಂಗಳು 2 ಸಾವಿರ ರೂಪಾಯಿಯಂತೆ 30 ತಿಂಗಳು ಹಣ ಕಟ್ಟಿದವರಿಗೆ 10 ಸಾವಿರ ಸೇರಿಸಿ 70 ಸಾವಿರ ನೀಡುವುದಾಗಿ ಹಬ್ಬಿಸಿದ್ದ.

ಅದರಂತೆ ಕೆಲವರಿಗೆ ಹಣ ನೀಡಿ ನಂಬಿಕೆ ಗಳಿಸಿಕೊಂಡು ಹೆಚ್ಚು ಜನ ಚಿಟ್ ಫಂಡ್ ಗೆ ಸೇರುವಂತೆ ಮಾಡಿದ್ದಾನೆ. ನಂತರ ಕಳೆದ 2 ತಿಂಗಳ ಹಿಂದೆ ತನ್ನ ಕಚೇರಿಗೆ ಬೀಗ ಜಡಿದು ರಾತ್ರೋ ರಾತ್ರಿ ಸುಮಾರು ನೂರಕ್ಕೂ ಹೆಚ್ಚು ಜನರ ಬಳಿ ಸಂಗ್ರಹಿಸಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಒಟ್ಟು ಹಣ ಸುಮಾರು ಆರೇಳು ಕೋಟಿ ಎನ್ನಲಾಗಿದ್ದು, ಹಣ ಕಟ್ಟಿದ್ದವರು ಸೂಲಿಬೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜೊತೆಗೆ ಆರೋಪಿಯನ್ನು ಬಂಧಿಸಿ ಹಣ ಕೊಡಿಸುವಂತೆ ಕೋರಿದ್ದರು. ಸೋಮಶೇಖರ್ ನೀಡಿದ್ದ ದೂರಿನ ಮೇರೆಗೆ ಪಾಪಣ್ಣನನ್ನು ಮದನಪಳ್ಳಿಯಲ್ಲಿ ಪೊಲೀಸರು ಬಂಧಿಸಿ ಸೂಲಿಬೆಲೆಗೆ ಕರೆತರಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

