ಧಾರವಾಡ: ಮಹಿಳೆಯರ ಮೇಲೆ ದೌರ್ಜನ್ಯ, ಹುಡುಗಿಯರನ್ನು ಚುಡಾಯಿಸುವುದು, ವಿದ್ಯಾರ್ಥಿನಿಯರನ್ನು ರೇಗಿಸುವಂತಹ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಗಟ್ಟುವ ದೃಷ್ಠಿಯಿಂದ ಸರ್ಕಾರ ಓಬವ್ವ ಆತ್ಮ ರಕ್ಷಣಾ ಕಲೆ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದು ವಿದ್ಯಾರ್ಥಿನಿಯರಿಗೆ ವಿವಿಧ ಆತ್ಮ ರಕ್ಷಣಾ ಕಲೆಗಳನ್ನು ಕಲಿಸಲು ಮುಂದಾಗಿದೆ.
ಈ ಯೋಜನೆಗೆ ಧಾರವಾಡದಲ್ಲಿ ಅಧೀಕೃತವಾಗಿ ಚಾಲನೆ ನೀಡಲಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರದ ಈ ಓಬವ್ವ ಆತ್ಮ ರಕ್ಷಣಾ ಕಲೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಚಾಲನೆ ನೀಡಿದರು.
ಧಾರವಾಡದ ವಿವಿಧ ವಿದ್ಯಾರ್ಥಿ ವಸತಿ ನಿಲಯದ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಆತ್ಮ ರಕ್ಷಣಾ ಕಲೆಯಾದ ಟೇಕ್ವಾಂಡೊ ಕಲೆಯನ್ನು ಕಲಿಸಿಕೊಡಲಾಗುತ್ತಿದೆ. ಈಗಾಗಲೇ ಅನೇಕ ವಿದ್ಯಾರ್ಥಿನಿಯರಿಗೆ ಈ ಕಲೆಯನ್ನು ಕಲಿಸಲಾಗಿದ್ದು, ಅವರು ತಮ್ಮ ಆತ್ಮ ರಕ್ಷಣೆಗೆ ಹುರಿಗೊಂಡಿದ್ದಾರೆ. ಅಲ್ಲದೇ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು ವಿದ್ಯಾರ್ಥಿನಿಯರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ವಿದ್ಯಾರ್ಥಿನಿ ಅದಿತಿ ಖುಷಿ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಯರಿಗೆ ಈ ಟೇಕ್ವಾಂಡೊ ಕಲಿಸಿಕೊಡಲಾಗುತ್ತಿದೆ. ವಾರದಲ್ಲಿ ಎರಡು ದಿನಗಳ ಕಾಲ ಈ ಕಲೆಯನ್ನು ಕಲಿಸಿಕೊಡಲಾಗುತ್ತಿದೆ ಎಂದು ತರಬೇತುದಾರ ಆನಂದ ಹೇಳಿದರು.
ಒಟ್ಟಾರೆಯಾಗಿ ರಾಜ್ಯದಾದ್ಯಂತ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಧಾರವಾಡದಲ್ಲೂ ಯೋಜನೆಗೆ ಅಧೀಕೃತವಾಗಿ ಚಾಲನೆ ನೀಡಲಾಗಿದೆ. ಈ ಯೋಜನೆ ಮೂಲಕ ವಿದ್ಯಾರ್ಥಿನಿಯರು ತಮ್ಮ ಆತ್ಮ ರಕ್ಷಣೆಯ ಕಲೆಯನ್ನು ಕಲಿತುಕೊಳ್ಳಲಿದ್ದು, ಪುಂಡರಿಗೆ ಇನ್ನು ಮುಂದೆ ವಿದ್ಯಾರ್ಥಿನಿಯರು ತಕ್ಕ ಪಾಠ ಕಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

