Breaking News

ಬರ ನಷ್ಟ ಪರಿಹಾರ ಸಮಸ್ಯೆ ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ: ಸುಪ್ರೀಂ ಕೋರ್ಟ್‌

ನವದೆಹಲಿ: ಬರದಿಂದ ಆಗಿರುವ ನಷ್ಟ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಕರ್ನಾಟಕ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಸಮಸ್ಯೆಯನ್ನು ನೀವೇ ಮಾತುಕತೆ ನಡೆಸಿ ಪರಿಹರಿಸಿಕೊಳ್ಳಿ ಎಂದು ಮೌಖಿಕವಾಗಿ ಸಲಹೆ ನೀಡಿದೆ.
2023ರಲ್ಲಿ ಬರದಿಂದ ತತ್ತರಿಸಿದ್ದ ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಮಂಗಳವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಅರ್‌. ಗವಾಯಿ, ಕೆ.ವಿ.ವಿಶ್ವನಾಥನ್‌ ಪೀಠದ ಮುಂದೆ ಈ ಅರ್ಜಿ ವಿಚಾರಣೆ ನಡೆಯಿತು.
ಈ ವೇಳೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಹಾಜರಾಗಿ, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಮತ್ತಷ್ಟು ಸಮಯಾವಕಾಶ ಬೇಕೆಂದು ಮನವಿ ಮಾಡಿದರು. ಈ ವೇಳೆ ನ್ಯಾಯಪೀಠವು, ‘ನೀವೇ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿತು. ಅಲ್ಲದೆ ‘ಎಷ್ಟು ಹಣ ಬಿಡುಗಡೆ ಮಾಡಲಾಗಿದೆ’ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಕರ್ನಾಟಕ ಪರ ವಕೀಲರು, ‘ ₹18,171 ಕೋಟಿ ಕೇಳಲಾಗಿತ್ತು. ಕೇಂದ್ರ ₹3,819 ಕೋಟಿ ನೀಡಿದೆ’ ಎಂದರು. ಬಳಿಕ ನ್ಯಾಯಪೀಠ ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡಿತು.
2023ರಲ್ಲಿ ಕರ್ನಾಟಕದಲ್ಲಿ ಬರಗಾಲ ತೀವ್ರವಾಗಿತ್ತು. ಇದರಿಂದಾಗಿ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರದಿಂದ ತತ್ತರಿಸಿದ್ದವು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿದ್ದವು. ಒಟ್ಟು 48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿದ್ದವು. ಇದರಿಂದ ಅಂದಾಜು ₹35,162 ಕೋಟಿ ಮೌಲ್ಯದ ಬೆಳೆಗಳು ಹಾಳಾಗಿದ್ದವು ಎಂದು ವಕೀಲ ಡಿ.ಎಲ್‌. ಚಿದಾನಂದ ಮೂಲಕ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು.
ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ ಮೂಲಕ ₹18,171 ಕೋಟಿ ಅನುದಾನ ನೀಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರ ಅಲ್ಪ ಹಣ ನೀಡಿ ಸುಮ್ಮನಾಗಿತ್ತು. ಹಲವಾರು ಬಾರಿ ಮನವಿ ಮಾಡಿದರೂ ಕೇಂದ್ರ ಸ್ಪಂದಿಸಿರಲಿಲ್ಲ. ಕೊನೆಗೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು.

Share News

About BigTv News

Check Also

SSLC PUC ಉದ್ಯೋಗ ಸುದ್ದಿ

ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ (BPNL) ಜಾನುವಾರು ಸಾಕಣೆ ಹೂಡಿಕೆ ಅಧಿಕಾರಿ, ಜಾನುವಾರು ಸಾಕಣೆ ಹೂಡಿಕೆ ಸಹಾಯಕ ಮತ್ತು ಜಾನುವಾರು …

Leave a Reply

Your email address will not be published. Required fields are marked *

You cannot copy content of this page