ಮೈಸೂರು: ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ವಿದ್ಯುತ್ ದೀಪಾಲಂಕಾರಕ್ಕೆ ಈ ಬಾರಿ ಹೆಚ್ಚಿನ ಮೆರುಗು ನೀಡಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದಿಂದ ಸಿದ್ಧತೆ ನಡೆದಿದೆ.
ಕೋವಿಡ್ ಕಾರಣದಿಂದಾಗಿ ಕಳೆದ ಎರಡು ದಸರಾ ಮಹೋತ್ಸವವನ್ನು ಸರಳವಾಗಿ ನಡೆಸಲಾಗಿತ್ತು. ಆದರೆ, ದೀಪಾಲಂಕಾರ ಸೊರಗಿರಲಿಲ್ಲ. ಈ ಬಾರಿ ನಾಡಹಬ್ಬವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ. ಇದಕ್ಕೆ ತಕ್ಕಂತೆ ವಿದ್ಯುತ್ ದೀಪಾಲಂಕಾರದ ಪ್ರಮಾಣವನ್ನೂ ಹೆಚ್ಚಿಸಲಾಗುತ್ತಿದೆ. ನಗರದ ಹೃದಯ ಭಾಗ, ಅರಮನೆ ಸುತ್ತಮುತ್ತಲಿನ ರಸ್ತೆಗಳೊಂದಿಗೆ ಇತರ ರಸ್ತೆಗಳನ್ನೂ ವಿದ್ಯುತ್ ದೀಪದ ಅಲಂಕಾರವು ಬೆಳಗಲಿದೆ. ಸಾರ್ವಜನಿಕರಿಗೆ ರಂಗಿ-ರಂಗಿನ ರಾತ್ರಿಗಳ ವೀಕ್ಷಣೆಗೆ ಅನುವು ಮಾಡಿಕೊಡಲಾಗುತ್ತಿದೆ.
ನವರಾತ್ರಿಯ ಸಂದರ್ಭದಲ್ಲಿ ಸೌಂದರ್ಯ ಲೋಕವನ್ನು ಸೃಷ್ಟಿಸುವ ವಿದ್ಯುತ್ ದೀಪಾಲಂಕಾರ ವೀಕ್ಷಿಸುವುದಕ್ಕೂ ಹೆಚ್ಚಿನ ಜನರು ಬರುತ್ತಾರೆ. ರಸ್ತೆಗಳಲ್ಲಿ ಸುತ್ತಾಡುತ್ತಾ ದೀಪಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ, ಫೋಟೊ ತೆಗೆಸಿಕೊಳ್ಳುತ್ತಾ, ಸೆಲ್ಫಿ ತೆಗೆಸಿಕೊಳ್ಳುತ್ತಾ ಸಂಭ್ರಮಿಸುತ್ತಾರೆ. ಅವರ ಖುಷಿಯನ್ನು ಇಮ್ಮಡಿಗೊಳಿಸಲು ಸೆಸ್ಕ್ ಯೋಜಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

