ಬೆಂಗಳೂರು: ನಮ್ಮ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನು ಬಂಧಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ನಮ್ಮ ಅವಧಿಯಲ್ಲಿ ಯಾವ ಅಧಿಕಾರಿ, ಮಂತ್ರಿಗಳು ಅದಕ್ಕೆ ಅವಕಾಶ ನೀಡಿದ್ದರೋ ನನಗೆ ಗೊತ್ತಿಲ್ಲ.ಇದು ಗಂಭೀರ ಅಪರಾಧವಾಗಿದೆ. ಚುನಾವಣಾ ಆಯೋಗವು ಈ ವಿಚಾರವನ್ನು ಡಿವಿಸಿಗೆ ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ. ನಾಳೆ ನಾವು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಗೌರವ್ ಗುಪ್ತಾ ಅವರು ಏಕಾಏಕಿ ಹಿಂಪಡೆದಿದ್ದಾರೆ. ಆದರೆ ಈಗಾಗಲೇ ಈ ಸಂಸ್ಥೆಯ ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಕೆಲವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳುತ್ತಿರುವ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿದೆ. ಈ ಸಂಸ್ಥೆಯ ಕಾರ್ಯವ್ಯಾಪ್ತಿ ಏನಿದೆ ಎಂದು ನಮ್ಮ ಬಳಿ ಮಾಹಿತಿ ಇದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮಾಹಿತಿ ಕಲೆ ಹಾಕಿದ್ದೇನೆ. ಅವರು ಜನ ಪ್ರತಿನಿಧಿಗಳ ಬಳಿ ಹೋಗಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಪ್ರತಿ ವಾರ್ಡ್ ನಲ್ಲಿ ಕಾರ್ಪೊರೇಟರ್ ಬಳಿ ಒಂದು ಕೋಟಿ ಹಣ ಕೇಳಿದ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ನಾವು ಕೂಡ ನಮ್ಮದೇ ಆದ ತನಿಖೆ ಮಾಡಿದ್ದೇವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

