ಹುಬ್ಬಳ್ಳಿ : ಜಲಮಂಡಳಿ ನೌಕರರು ಹಾಗೂ ಎಲ್ & ಟಿ ಕಂಪನಿ ನಡುವಿನ ಕಿತ್ತಾಟದಿಂದಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಭೀಕರಗೊಂಡಿದೆ. ಕಳೆದ 10 ದಿನಗಳಿಂದ ನೀರು ಪೂರೈಕೆಯಾಗದ ಕಾರಣ ಇಂದು ಬೆಳಗ್ಗೆ ನವನಗರ, ಗಾಮನಗಟ್ಟಿ, ಪ್ರಜಾನಗರ ಹಾಗೂ ಸಿಟಿಪಾರ್ಕ್ ನಿವಾಸಿಗಳು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು.
ಜಲಮಂಡಳಿಯ ಕೆಲವು ವಾಲ್ವಮನ್‌ಗಳು ಉದ್ದೇಶ ಪೂರ್ವಕವಾಗಿ ನೀರು ವಿತರಣೆ ವ್ಯವಸ್ಥೆ ಹದಗಡಿಸುತ್ತಿದ್ದಾರೆ. ಮಧ್ಯರಾತ್ರಿ ವಾಲ್ ಬಂದ್ ಮಾಡುವುದು ಹಾನಿಗೊಳಿಸುವುದು, ಚೇಂಬರ್‌ಗಳಲ್ಲಿ ಕಲ್ಲು ಮಣ್ಣು ಹಾಗೂ ಗಾಜಿನ ತುಂಡುಗಳನ್ನು ಹಾಕಿ ಮುಚ್ಚುವಂತಹ ದುಷ್ಕೃತ್ಯದಲ್ಲಿ ತೊಡಗಿದ್ದಾರೆ.
ಇದಕ್ಕೆ ಎಲ್ & ಟಿ ಕಂಪನಿ ಅಧಿಕಾರಿಗಳು ಯಾವುದಕ್ಕೂ ಕ್ಯಾರೆ ಮಾಡುತ್ತಿಲ್ಲ. ಬೆರಳೆಣಿಕೆಯಷ್ಟಿರುವ ಕಂಪನಿ ಸಿಬ್ಬಂದಿಗೆ ನೀರು ಪೂರೈಕೆ ವ್ಯವಸ್ಥೆಯೂ ಗೊತ್ತಿಲ್ಲ. ಯಾವ್ ವಾಲ್ ಆಪರೇಟ್ ಮಾಡಬೇಕೆಂಬ ಮಾಹಿತಿಯೇ ಇಲ್ಲ. ಇದನ್ನೇ ದುರುಪಯೋಗ ಪಡಿಸಿಕೊಂಡ ಜಲಮಂಡಳಿ ವಾಲ್ವಮನ್‌ಗಳು ಮಧ್ಯರಾತ್ರಿ ನೀರು ಪೂರೈಕೆ ವ್ಯವಸ್ಥೆಯನ್ನೇ ಹಾಳುಗೆಡವಿ ಎಲ್ & ಟಿ ಕಂಪನಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಜಲಮಂಡಳಿ ಹಾಗೂ ಎಲ್ & ಟಿ ಕಂಪನಿ ನಡುವಿನ ಸಂಘರ್ಷದಿಂದಾಗಿ ನವನಗರ ನಿವಾಸಿಗಳು ನೀರಿಲ್ಲದೆ ಪರದಾಡುವಂತಾಗಿದೆ. ಆದರೆ ಸಾರ್ವಜನಿಕರ ಕೋಪಕ್ಕೆ ಕಾರ್ಪೋರೇಟರ್ ಚಂದ್ರಶೇಖರ್ ಮನಗುಂಡಿ ಹಾಗೂ ಶ್ರೀಮತಿ ಸುನಿತಾ ಮಾಳ್ವದೇಕರ ತುತ್ತಾಗಬೇಕಾಗಿದೆ. ಕಳೆ ಎರಡು ದಿನಗಳಿಂದ ನೀರು ಪೂರೈಕೆ ಸರಿಪಡಿಸಲು ಇಬ್ಬರೂ ಕಾರ್ಪೋರೇಟರ್ ಹರಸಾಹಸ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.
ನೀರು ಪೂರೈಕೆ ವಾಲ್ಸ್ ಹಾಳು ಮಾಡಿರುವ ವಾಲ್ವಮನ್‌ಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ನವನಗರ ನಿವಾಸಿಗಳು ಸಹಿ ಸಂಗ್ರಹ ಆರಂಭಿಸಿದ್ದಾರೆ. ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಹಾಗೂ ಮೇಯರ್ ಈರೇಶ್ ಅಂಚಟಗೇರಿ ನೀರು ಪೂರೈಕೆ ಸರಿಪಡಿಸಲು ಪ್ರಯತ್ನಿಸುವುದಾಗಿ ಭರವಸೆ ಮಾತ್ರ ನೀಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

