ಬೆಂಗಳೂರು: ಈ ಬಾರಿ ಗಣೇಶೋತ್ಸವ ಆಚರಣೆ ಹಾಗೂ ಈದ್ ಮಿಲಾದ್ ವೇಳೆ ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
ಹೀಗಾಗಿ ಅಲ್ಲಲ್ಲಿ ಗಣೇಶನ ಮೂರ್ತಿ ಕೂರಿಸಿ ಜೋರಾಗಿ ಮ್ಯೂಸಿಕ್ ಹಾಕಿ ಜನ ಸಂಭ್ರಮಾಚರಿಸುವುದು ಸಹಜ. ಆದರೆ ಈ ಬಾರಿ ರಾಜ್ಯ ಸರ್ಕಾರ ಕೆಲವೊಂದು ಷರತ್ತು ವಿಧಿಸಿದೆ. ಗಲ್ಲಿ ಗಲ್ಲಿಯಲ್ಲಿ ಗಣೇಶ ಕೂರಿಸುವ ಮೊದಲು ಸ್ಥಳೀಯಾಡಳಿತದ ಒಪ್ಪಿಗೆ ಪಡೆಯಬೇಕು. ಯಾರೂ ರಸ್ತೆ ಅಡ್ಡಗಟ್ಟಿ ಗಣೇಶನ ಮೂರ್ತಿ ಕೂರಿಸುವಂತಿಲ್ಲ. ರಾತ್ರಿ 10 ರ ನಂತರ ಗಣೇಶ ವಿಸರ್ಜನೆ ಮಾಡುವಂತಿಲ್ಲ. ಜೊತೆಗೆ ಡಿಜೆ ಸೌಂಡ್ ಹಾಕಿ ಇತರರಿಗೆ ತೊಂದರೆ ಮಾಡುವಂತಿಲ್ಲ ಎಂದು ನಿಷೇಧ ಹೇರಿದೆ.
ಸೆಪ್ಟೆಂಬರ್ 7 ಕ್ಕೆ ಗಣೇಶ ಹಬ್ಬವಾದರೆ ಸೆಪ್ಟೆಂಬರ್ 15 ಕ್ಕೆ ಈದ್ ಮಿಲಾದ್ ಹಬ್ಬವಿದೆ. ಈ ಹಬ್ಬಕ್ಕೂ ಡಿಜೆಗೆ ಅವಕಾಶವಿಲ್ಲ ಎಂದು ಸರ್ಕಾರ ಫರ್ಮಾನು ಹೊರಡಿಸಿದೆ. ಡಿಜೆ ಸಿಸ್ಟಂಗಳನ್ನು ಎರಡೂ ಹಬ್ಬಕ್ಕೆ ನಿಷೇಧಿಸಲಾಗಿದೆ. ಡಿಜೆ ಸೌಂಡ್ ಹಾಕಿದರೆ ಚಿಕ್ಕಮಕ್ಕಳಿಗೆ, ವಯಸ್ಸಾದವರಿಗೆ, ದುರ್ಬಲ ಹೃದಯದವರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ. ಎರಡೂ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸರ್ಕಾರ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

