ಬೆಂಗಳೂರು: ಎಪಿಎಂಸಿ ಕಾಯ್ದೆ ಮರುಸ್ಥಾಪನೆಯಿಂದ ರೈತರಿಗೆ ಹೆಚ್ಚು ಅನುಕೂಲವಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ಕು ಬೆಳೆಗಳನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಸರುಕಾಳು, ಸೂರ್ಯಕಾಂತಿ, ಸೋಯಾಬಿನ್ ಮತ್ತು ಉದ್ದಿನಕಾಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಲಾಗುತ್ತಿದೆ. ಸೋಯಾಬಿನ್ ಮತ್ತು ಉದ್ದಿನಕಾಳು ಖರೀದಿ ಪ್ರಕ್ರಿಯೆ ಆರಂಭಿಸಲು ಸೆ.5ರ ಗುರುವಾರದಂದು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು, ಈಗಾಗಲೇ ಹೆಸರುಕಾಳು ಮತ್ತು ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ರಾಜ್ಯ ಸರ್ಕಾರ ಖರೀದಿ ಏಜನ್ಸಿಗಳನ್ನು ನೇಮಕ ಮಾಡಿದೆ. ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಲ್ ಸೂರ್ಯಕಾಂತಿ ಮತ್ತು 10 ಕ್ವಿಂಟಲ್ ಹೆಸರುಕಾಳು ಖರೀದಿ ಮಾಡಲಿದೆ, ಎಫ್ ಎ ಕ್ಯೂ ಗುಣಮಟ್ಟದ ಸೋಯಾಬಿನ್ ಗೆ ಕ್ವಿಂಟಲ್ ಗೆ 4,892 ರೂ ಹಾಗೂ ಉದ್ದಿನ ಕಾಳಿಗೆ ಕ್ವಿಂಟಲ್ ಗೆ 7,400 ರೂ. ಬೆಲೆ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆಯಲ್ಲಿ ಸುಮಾರು 10 ಲಕ್ಷ ಕ್ವಿಂಟಲ್ ಸೋಯಾಬಿನ್ ಮತ್ತು 2 ಲಕ್ಷ ಕ್ವಿಂಟಲ್ ಉದ್ದಿನಕಾಳು ಖರೀದಿ ಮಾಡಲಾಗುವುದು.
2024-25ನೇ ಸಾಲಿನಲ್ಲಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 4.72 ಲಕ್ಷ ಮೆಟ್ರಿಕ್ ಟನ್ ಸೋಯಾಬಿನ್ ಹಾಗೂ 0.77 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 0.40 ಲಕ್ಷ ಮೆಟ್ರಿಕ್ ಟನ್ ಉದ್ದಿನಕಾಳು ಇಳುವರಿ ನಿರೀಕ್ಷೆ ಮಾಡಲಾಗಿತ್ತು, ಎಫ್ ಎ ಕ್ಯೂ ಗುಣಮಟ್ಟದ ಹೆಸರುಕಾಳಿಗೆ ಪ್ರತಿ ಕ್ವಿಂಟಲ್ ಗೆ 8,682 ರೂ. ಹಾಗೂ ಸೂರ್ಯಕಾಂತಿಗೆ 7,280 ರೂ. ನಿಗದಿಪಡಿಸಲಾಗಿದೆ.
ಹೆಸರುಕಾಳು ಖರೀದಿಗೆ 172 ಖರೀದಿ ಕೇಂದ್ರ ಗುರುತಿಸಲಾಗಿದ್ದು, ಇದುವರೆಗೂ 1982 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೂರ್ಯಕಾಂತಿ ಖರೀದಿಗೆ 19 ಖರೀದಿ ಕೇಂದ್ರ ಗುರುತಿಸಲಾಗಿದ್ದು, 461 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಕೊಬ್ಬರಿ ಖರೀದಿಯಲ್ಲೂ ಈ ಬಾರಿ ಪ್ರಮುಖ ಪಾತ್ರ ವಹಿಸಲಾಗಿದ್ದು, ಇದೇ ಮೊದಲ ಬಾರಿಗೆ ಮಿಲ್ಲಿಂಗ್ ಕೊಬ್ಬರಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

