ಬೆಂಗಳೂರು: ರಾಜ್ಯದ ಸಮೃದ್ಧ ಅರಣ್ಯ ಸಂಪತ್ತಿನ ರಕ್ಷಣೆಗೆ ಹಗಲಿರುಳು, ಜೀವದ ಹಂಗು ತೊರೆದು ಶ್ರಮಿಸುವ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಾಲಿ ಇರುವ ಪೊಲೀಸ್ ಕ್ಯಾಂಟೀನ್ ಸೌಲಭ್ಯ ಬಳಸಿಕೊಳ್ಳಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಅರಣ್ಯ ಭವನದಲ್ಲಿಂದು ರಾಷ್ಟ್ರೀಯ ಹುತಾತ್ಮರ ದಿನದ ಅಂಗವಾಗಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಸಮರ್ಪಿಸಿದ ಬಳಿಕ ಮಾತನಾಡಿದ ಅವರು, ಕಾಡ್ಗಿಚ್ಚು ನಂದಿಸುವಾಗ, ಮಾನವ-ವನ್ಯಜೀವಿ ಸಂಘರ್ಷ ತಡೆಯುವ ಸಂದರ್ಭದಲ್ಲಿ ಮತ್ತು ಒತ್ತುವರಿದಾರರು ಮತ್ತು ಕಾಡುಗಳ್ಳರ ಆಕ್ರೋಶಕ್ಕೆ ಗುರಿಯಾಗಿ ಈವರೆಗೆ 61 ಅರಣ್ಯ ಸಿಬ್ಬಂದಿ ಮತ್ತು ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ಎಲ್ಲರ ಕುಟುಂಬದೊಂದಿಗೆ ಇಲಾಖೆ ನಿಂತಿದೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹುತಾತ್ಮರ ಕುಟುಂಬಕ್ಕೆ ಪರಿಹಾರ ನೀಡುವ ಘೋಷಣೆ ಮಾಡಿದರು, 30 ಲಕ್ಷ ರೂ. ಇದ್ದ ಪರಿಹಾರದ ಮೊತ್ತವನ್ನು ಈಗ 50 ಲಕ್ಷ ರೂ.ಗೆ ಹೆಚ್ಚಿಸುವ ಕಾರ್ಯವನ್ನೂ ಅವರೇ ಮಾಡಿದ್ದಾರೆ ಎಂದರು.
ನಮ್ಮ ಸರ್ಕಾರ ಅರಣ್ಯದಲ್ಲಿ ಜೀವದ ಹಂಗು ತೊರೆದು ಆನೆ ಕಾರ್ಯಪಡೆ, ಕಳ್ಳಬೇಟಿ ನಿಗ್ರಹ ಶಿಬಿರ ಮತ್ತು ಇತರ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರಿಗೂ ಮಾಸಿಕ 2 ಸಾವಿರ ರೂ. ಕಷ್ಟ ಕಾರ್ಯ ಭತ್ತೆ ನೀಡುವ ಘೋಷಣೆ ಮಾಡಿದ್ದು, ಇದನ್ನು ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

