ವಿಜಯನಗರ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ 7280 ರೂ.ದಂತೆ ರೈತರಿಂದ ಖರೀದಿಗಾಗಿ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧೆಡೆ ಪ್ರಾರಂಭಿಸಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಟಾಸ್ಕ್ ಫೊರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸರ್ಕಾರದ ಆದೇಶದಲ್ಲಿನ ಮಾರ್ಗಸೂಚನೆಯಂತೆ, ವಿಜಯನಗರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ ಚಿತ್ರದುರ್ಗ, ವಿಭಾಗೀಯ ಕಚೇರಿ, ವಿಜಯನಗರ ಇವರಿಂದ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಖರೀದಿಸಲಾಗುತ್ತಿದೆ.
ಒಣಗಿದ ಹಾಗೂ ಸ್ವಚ್ಛ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಉತ್ಪನ್ನವನ್ನು ಕೇಂದ್ರಕ್ಕೆ ಮಾರಾಟಕ್ಕೆ ತರಬೇಕು. ಸೂರ್ಯಕಾಂತಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು 24-08-2024ರಿಂದ ಅನ್ವಯವಾಗುವಂತೆ 45 ದಿನಗಳೊಳಗೆ ನೋಂದಣಿ ಮಾಡಿಸಿ ನೋಂದಣಿ ಚೀಟಿ ಪಡೆಯಬೇಕು.
ನಿಗದಿತ ಅವಧಿಯೊಳಗೆ ನೋಂದಣಿಗೊಂಡ ರೈತರಿಂದ ಪ್ರತಿ ಎಕರೆಗೆ 03 (ಮೂರು) ಕ್ವಿಂಟಾಲ್ ಗರಿಷ್ಠ 15 (ಹದಿನೈದು) ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು. ಸೂರ್ಯಕಾಂತಿ ಉತ್ಪನ್ನವನ್ನು 24-08-2024 ರಿಂದ ಅನ್ವಯವಾಗುವಂತೆ 90 ದಿನಗಳವರೆಗೆ ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆವರೆಗೆ ಮಾತ್ರ ಖರೀದಿಸಲಾಗುವುದು. ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಖರೀದಿಸಲಾಗುವುದು ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





