ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆ. 21ರಿಂದ 23ರವರೆಗೆ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ.
ಸೆಪ್ಟೆಂಬರ್ 21ರಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಡೆಲವೇರ್ ನಿವಾಸದಲ್ಲಿ ಆಯೋಜಿಸಿರುವ ಕ್ವಾಡ್ ರಾಷ್ಟ್ರಗಳ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ 22ರಂದು ನ್ಯೂಯಾರ್ಕ್ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಲಿದ್ದಾರೆ. ಜತೆಗೆ, ಕೃತಕ ಬುದ್ಧಿಮತ್ತೆ (ಎಐ), ಜೈವಿಕ ತಂತ್ರಜ್ಞಾನ, ಸೆಮಿಕಂಡಕ್ಟರ್ ಸೇರಿದಂತೆ ಇತರೆ ವಲಯಗಳಲ್ಲಿ ಸಹಯೋಗವನ್ನು ಬೆಳೆಸಲು ಅಮೆರಿಕ ಮೂಲದ ಪ್ರಮುಖ ಕಂಪನಿಗಳ ಸಿಇಒಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಸೆಪ್ಟೆಂಬರ್ 23ರಂದು ನ್ಯೂಯಾರ್ಕ್ನಲ್ಲಿ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಸೆ. 21ರಂದು ಕ್ವಾಡ್ ಶೃಂಗಸಭೆ ಶುರುವಾಗಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಜಪಾನ್ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಅವರನ್ನು ಸ್ವಾಗತಿಸಲು ಬೈಡನ್ ಅವರು ಎದುರು ನೋಡುತ್ತಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೈನ್ ಜಿನ್ ಪಿಯಾರೆ ತಿಳಿಸಿದ್ದಾರೆ.
ಈ ವರ್ಷ ನಡೆಯಬೇಕಿದ್ದ ಕ್ವಾಡ್ ಶೃಂಗಸಭೆಯನ್ನು ಭಾರತವು ಮುಂದಿನ ವರ್ಷ ಆಯೋಜಿಸಿದೆ. ಅಧ್ಯಕ್ಷ ಹುದ್ದೆ ಮುಗಿಯಲು ಕೆಲವೇ ತಿಂಗಳು ಬಾಕಿ ಉಳಿದಿರುವಂತೆಯೇ, ಜೋ ಬೈಡನ್ ಅವರು ಕ್ವಾಡ್ ಶೃಂಗಸಭೆ ಆಯೋಜಿಸುವ ಮೂಲಕ ಮಹತ್ವದ ವಿದೇಶಾಂಗ ನೀತಿಯ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಕ್ವಾಡ್ ರಾಜತಾಂತ್ರಿಕ ಸಹಭಾಗಿತ್ವದ ಒಕ್ಕೂಟವಾಗಿದ್ದು, ಅಮೆರಿಕ, ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್ ಸದಸ್ಯ ರಾಷ್ಟ್ರಗಳಾಗಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

