Breaking News

ಕಲ್ಯಾಣ ಕರ್ನಾಟಕ ಭಾಗದ ಸರ್ವಾಂಗೀಣ ಅಭಿವೃದ್ದಿಗೆ ಸರ್ಕಾರ ಕಂಕಣಬದ್ಧ: ಸಿಎಂ ಸಿದ್ದರಾಮಯ್ಯ

ಕಲಬುರಗಿ: ಕಲ್ಯಾಣ ಕರ್ನಾಟಕವೆಂಬ ಶಿರೋನಾಮೆ ಇಟ್ಟುಕೊಂಡರೂ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಕಳಚಿಕೊಳ್ಳದ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದ ಸ್ಮರಣೆಗಾಗಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯ ದಿನವಾದ ಮಂಗಳವಾರ ( ಸೆ.17) ರಾಜ್ಯ ಸರ್ಕಾರವೇ ಇಲ್ಲಿಗೆ ಸ್ಥಳಾಂತರಗೊಂಡಿತ್ತು.
ಕಡೆಗಣನೆಗೆ ಗುರಿಯಾಗಿದೆ ಎಂದು ಟೀಕೆಯನ್ನು ಸದಾ ಎದುರಿಸುತ್ತಾ ಬಂದಿರುವ ಈ ಪ್ರದೇಶಕ್ಕೆ ಇನ್ನಾದರೂ ಪ್ರಗತಿ ವರ್ಷಧಾರೆ ಹರಿಯಬೇಕು ಎಂಬ ಬೇಡಿಕೆಯನ್ನು ಈಡೇರಿಸುವತ್ತ ಸರ್ಕಾರ ಮಹತ್ವದ ದಾಖಲೆಗಳನ್ನೂ ಬರೆಯಿತು.
ಬೆಳಿಗ್ಗೆ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು, ಭರವಸೆಗಳ ಹೊಂಬೆಳಕು ಚೆಲ್ಲಿದ್ದ ಸರ್ಕಾರದ ನೇತಾರರು, ಸಂಜೆಯ ಹೊತ್ತಿಗೆ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ಯೋಜನೆಗಳಿಗೆ ಅನುದಾನ ಒದಗಿಸುವ ಕಡತಗಳಿಗೆ ಒಪ್ಪಿಗೆಯನ್ನು ನೀಡಿದರು. ದಶಕಗಳ ಬಳಿಕ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗ ಸೃಷ್ಟಿ ಹಾಗೂ ವಿವಿಧ ಯೋಜನೆಗಳಿಗೆ ಭರಪೂರ ಅನುದಾನ ನೀಡುವ ತೀರ್ಮಾನವನ್ನೂ ಕೈಗೊಳ್ಳಲಾಯಿತು.
ಸಂಪುಟ ಸಭೆ ಬಳಿಕ ಸಚಿವರ ದಂಡಿನೊಂದಿಗೆ ತಾವೇ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸರ್ಕಾರದ ನಿರ್ಣಯಗಳನ್ನು ಪ್ರಕಟಿಸಿದರು.
ಸಂಪುಟದ ಮುಂದೆ ಬಂದಿದ್ದ ಒಟ್ಟು ₹ 12,692 ಕೋಟಿ ಮೊತ್ತದ 56 ವಿಷಯಗಳಿಗೆ ಅನುಮೋದನೆ ನೀಡಿದ್ದೇವೆ. ಇವುಗಳ ಪೈಕಿ ₹ 11,770 ಕೋಟಿ ಮೊತ್ತದ 46 ವಿಷಯಗಳು ಕಲ್ಯಾಣ ಕರ್ನಾಟಕ ಭಾಗಕ್ಕೇ ಸೇರಿದ್ದು, ಇವುಗಳಿಗೆ ಅನುಮೋದನೆ ನೀಡಲಾಗಿದೆ. ಬೀದರ್‌ ಹಾಗೂ ಕಲಬುರಗಿ ಜಿಲ್ಲೆಗಳ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ₹ 7,200 ಕೋಟಿ ಯೋಜನೆಗೆ ಒಪ್ಪಿಗೆ ನೀಡಿದ್ದೇವೆ ಎಂದೂ ಅವರು ಹೇಳಿದರು.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *