ನವದೆಹಲಿ: ಅಮೆರಿಕದ ಸಹಭಾಗಿತ್ವದಲ್ಲಿ ಭಾರತದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ ಸ್ಥಾಪನೆ ಆಗಲಿದೆ. ಶಕ್ತಿ ಹೆಸರಿನ ಈ ಫ್ಯಾಬ್ ಯೂನಿಟ್ 2025 ರಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಇದು ಭಾರತದ ಮೊದಲ ಸೆಕ್ಯೂರಿಟಿ ಸೆಮಿಕಂಡಕ್ಟರ್ ಫ್ಯಾಬ್ ಯೂನಿಟ್ ಆಗಲಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಈ ಯೋಜನೆ ಮುನ್ನಡೆಸಲಿದೆ. ಭಾರತ್ ಸೆಮಿ, ಥರ್ಡ್ ಐ ಟೆಕ್ ಯುಎಸ್ ಸ್ಪೇಸ್ ಫೋರ್ಸ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಯೂನಿಟ್ ರೂಪುಗೊಳ್ಳಲಿದೆ.
ಈ ಘಟಕದಲ್ಲಿ ಇನ್ಫ್ರಾರೆಡ್, ಗ್ಯಾಲಿಯಂ ನೈಟ್ರೇಡ್ ಮತ್ತು ಸಿಲಿಕಾನ್ ಕಾರ್ಬೈಡ್ ಸೆಮಿಕಂಡಕ್ಟರ್ ಚಿಪ್ಗಳನ್ನು ಪ್ರಮುಖವಾಗಿ ತಯಾರಿಸಲಾಗುತ್ತದೆ. ಅಮೆರಿಕದ ಸೇನಾ ಪಡೆ ಹಾಗೂ ಅಮೆರಿಕದ ಮಿತ್ರ ದೇಶಗಳ ಮಿಲಿಟರಿಗಳಿಗೆ ಈ ಚಿಪ್ಗಳನ್ನು ಸರಬರಾಜು ಮಾಡಲಾಗುತ್ತದೆ. ಭಾರತದ ಸೇನಾ ಪಡೆಗಳಿಗೂ ಇಲ್ಲಿಂದಲೇ ಚಿಪ್ಗಳನ್ನು ಸರಬರಾಜು ಮಾಡಬಹುದು. ಈ ಫ್ಯಾಬ್ ಘಟಕ ನಿರ್ಮಾಣದಲ್ಲಿ ಭಾಗಿಯಾಗಿರುವ ಥರ್ಡ್ ಐ ಟೆಕ್ ಸಂಸ್ಥೆ ಭಾರತದ ಸ್ಟಾರ್ಟಪ್ ಆಗಿದೆ. ವಿನಾಯಕ್ ದಾಲ್ಮಿಯಾ ಮತ್ತು ವೃಂದಾ ಕಪೂರ್ ಎಂಬಿಬ್ಬರು ಯುವ ಉದ್ಯಮಿಗಳು ಸ್ಥಾಪಿಸಿದ ಈ ಸ್ಟಾರ್ಟಪ್ ಜೊತೆ ಅಮೆರಿಕದ ರಕ್ಷಣಾ ಕ್ಷೇತ್ರದ ದಿಗ್ಗಜವಾಗಿರುವ ಜನರಲ್ ಅಟಾಮಿಕ್ಸ್ ಸಹಭಾಗಿತ್ವ ಹೊಂದುತ್ತಿದೆ. ಇದೊಂದೇ ಅಲ್ಲ, ಇನ್ನೂ ಹಲವಾರು ಯೋಜನೆಗಳಲ್ಲಿ ಇವೆರಡೂ ಸಂಸ್ಥೆಗಳು ಜೊತೆಯಾಗಿವೆ.
ಭಾರತವು ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವ ಹೊತ್ತಲ್ಲೇ ಶಕ್ತಿ ಸೆಮಿಕಂಡಕ್ಟರ್ ಫ್ಯಾಬ್ ಯೋಜನೆ ರೂಪುಗೊಳ್ಳುತ್ತಿದೆ. ಇದು ಭಾರತದ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಪುಷ್ಟಿ ಕೊಡುವ ನಿರೀಕ್ಷೆ ಇದೆ. ರಕ್ಷಣಾ ಕ್ಷೇತ್ರದಂತಹ ಸೂಕ್ಷ್ಮ ವಿಚಾರದಲ್ಲಿ ಭಾರತದ ಬಗ್ಗೆ ಅಮೆರಿಕ ವಿಶ್ವಾಸ ಹೊಂದಿರುವುದೂ ಕೂಡ ಗಮನಾರ್ಹ ಸಂಗತಿ. ಇದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಇನ್ನೊಂದು ಹಂತ ಮೇಲೆ ಕೊಂಡೊಯ್ದಂತಾಗುತ್ತದೆ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

