ಬೆಂಗಳೂರು: ನಿಗದಿತ ಅವಧಿಯ ಒಳಗೆ ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡದ 318 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಅಮಾನತು ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೂಚಿಸಿದೆ.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಲು ಸಿಟಿಜನ್ ಪೋರ್ಟಲ್ ಮೂಲಕ ಸಲ್ಲಿಕೆಯಾದ ಬೇಡಿಕೆ ಆಧಾರದಲ್ಲಿ ಪ್ರತಿ ಪಂಚಾಯಿತಿವಾರು ಪಟ್ಟಿ ಸಿದ್ಧಪಡಿಸಲಾಗಿತ್ತು. ಎಲ್ಲ ಪಂಚಾಯಿತಿಗಳಿಂದ ಸಲ್ಲಿಕೆಯಾಗಿದ್ದ 4.85 ಲಕ್ಷ ಶೌಚಾಲಯಗಳಲ್ಲಿ 3.60 ಲಕ್ಷ ಶೌಚಾಲಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಅನುದಾನವನ್ನು ನಿಗದಿತ ಅವಧಿಯ ಒಳಗೆ ಖರ್ಚು ಮಾಡದ ಪಿಡಿಒಗಳನ್ನು ಅಮಾನತು ಮಾಡಲು ಆದೇಶ ಹೊರಡಿಸಿರುವ ಇಲಾಖೆ, ತಕ್ಷಣ ಕ್ರಮ ಕೈಗೊಳ್ಳುವಂತೆ 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಪತ್ರ ಬರೆದಿದೆ.
ದಕ್ಷಿಣ ಕನ್ನಡ ಬಿಟ್ಟು ರಾಜ್ಯದ 30 ಜಿಲ್ಲೆಗಳಿಗೂ ಬೇಡಿಕೆಯ ಆಧಾರದಲ್ಲಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಅವುಗಳಲ್ಲಿ 318 ಪಂಚಾಯಿತಿಗಳು ಆಗಸ್ಟ್ ಅಂತ್ಯದವರೆಗೂ ಒಂದೂ ಶೌಚಾಲಯ ನಿರ್ಮಿಸದೇ, ಅನುದಾನವನ್ನು ಹಾಗೆಯೇ ಉಳಿಸಿಕೊಂಡಿದ್ದವು. ಈ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಚರ್ಚೆ ನಡೆದಿತ್ತು. ಅನುದಾನ ಬಳಕೆ ಮಾಡದ ಎಲ್ಲ ಪಂಚಾಯಿತಿಗಳ ಪಿಡಿಒ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಭೆಯಲ್ಲಿ ಸೂಚಿಸಲಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

