Breaking News

ಕಲಬುರಗಿ ಜಿಲ್ಲೆಯಲ್ಲಿ ಹೊಸದಾಗಿ 7 ನಮ್ಮ ಕ್ಲಿನಿಕ್ ಗಳ ಮಂಜೂರು

ಕಲಬುರಗಿ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸದಾಗಿ ಏಳು ನಮ್ಮ ಕ್ಲಿನಿಕ್ ಗಳನ್ನು ಜಿಲ್ಲೆಗೆ ಮಂಜೂರು ಮಾಡಿದೆ. ಅವುಗಳಿಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಥಳವನ್ನೂ ಗುರುತಿಸಿದ್ದಾರೆ.
ಪ್ರಸ್ತುತ ನಗರ ವ್ಯಾಪ್ತಿಯಲ್ಲಿ ಶ್ರೀರಾಮ ನಗರ, ಸಂತ್ರಾಸವಾಡಿಯ ನಯಾ ಮೊಹಲ್ಲಾ, ಕಪನೂರ ಕೈಗಾರಿಕೆ ಪ್ರದೇಶ, ರಾಮಜಿ ನಗರ, ರಾಜಾಪೂರ, ಕೋಟನೂರ ಹಾಗೂ ಬಂಬೂ ಬಜಾರ್‌ ಸೇರಿ 7 ಹಾಗೂ ಗ್ರಾಮೀಣ ಭಾಗದ ಚಿಂಚೋಳಿ, ಶಹಾಬಾದ್, ಜೇವರ್ಗಿ ಮತ್ತು ಅಫಜಲಪುರದ 4 ಸೇರಿ ಒಟ್ಟು 11 ನಮ್ಮ ಕ್ಲಿನಿಕ್‌ ಗಳು ಕಾರ್ಯನಿರ್ವಹಿಸುತ್ತಿವೆ. ಮುಂದೆ ಅವುಗಳ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ.
ಹೊಸದಾಗಿ ಮಂಜೂರಾದ ನಮ್ಮ ಕ್ಲಿನಿಕ್‌ ಗಳಿಗೆ ಕೊಳಗೇರಿ, ಜನ ದಟ್ಟಣೆಯ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಕಾಳಗಿಯ ಬಸವೇಶ್ವರ ವೃತ್ತ ಸಮೀಪದ ಪಟ್ಟಣ ಪಂಚಾಯಿತಿಗೆ ಸೇರಿದ ಕಟ್ಟಡ, ಕಮಲಾಪುರ ಪಟ್ಟಣ ಪಂಚಾಯಿತಿ ಪಕ್ಕದ ಸರ್ಕಾರಿ ಶಾಲೆಯ ಕಟ್ಟಡ ಹಾಗೂ ಯಡ್ರಾಮಿ ಪಟ್ಟಣದ ಹಳೆ ಬಜಾರ್‌ನ ಬಾಡಿಗೆ ಕಟ್ಟಡವನ್ನು ನಮ್ಮ ಕ್ಲಿನಿಕ್‌ ಗಾಗಿ ನಿಗದಿಪಡಿಸಲಾಗಿದೆ. ನಗರ ಪ್ರದೇಶದ ಮೋಮಿನಪುರದಲ್ಲಿ ಮಸೀದಿ ಪಕ್ಕದ ಬಾಡಿಗೆ ಕಟ್ಟಡ, ಖಾಜಾ ಕಾಲೊನಿಯ ಸರ್ಕಾರಿ ಶಾಲಾ ಕಟ್ಟಡ, ಜೀಲಾನಾಬಾದ್‌ನ ಬಾಡಿಗೆ ಕಟ್ಟಡ ಮತ್ತು ನಾಗನಹಳ್ಳಿಯಲ್ಲಿ ಪೊಲೀಸ್ ತರಬೇತಿ ಕೇಂದ್ರದ ಕಟ್ಟಡದಲ್ಲಿ ಹೊಸ ಕ್ಲಿನಿಕ್‌ಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ.
ಮೂರು ತಿಂಗಳ ಹಿಂದೆಯೇ ಹೊಸದಾಗಿ ಮಂಜೂರಾದ ಏಳು ಕ್ಲಿನಿಕ್‌ಗಳಿಗೆ ಈಗಾಗಲೇ ಸ್ಥಳಗಳನ್ನು ಗುರುತಿಸಿ, ಅವುಗಳ ಮಾಹಿತಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ಅಗತ್ಯ ಸೌಕರ್ಯಗಳೊಂದಿಗೆ ಕಾರ್ಯಾರಂಭ ಮಾಡಲಿವೆ ಎಂದು ನಮ್ಮ ಕ್ಲಿನಿಕ್ ನಗರ ಯೋಜನೆಯ ಶ್ರೀಕಾಂತಸ್ವಾಮಿ ಮಾಹಿತಿ ನೀಡಿದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *